ಕುಂಬಳೆ: .ಕೇರಳದ ಶಿಕ್ಷಣ ವ್ಯವಸ್ಥೆಯು ಸಮಗ್ರ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಹೊಸ ಪೀಳಿಗೆಯನ್ನು ಸೃಷ್ಟಿಸಲು ನಮ್ಮ ಶಾಲೆಗಳು ಸಮರ್ಥವಾಗಿವೆ ಎಂದು ಸಚಿವರು ಹೇಳಿದರು.
ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಮಹಡಿ ಕಟ್ಟಡವನ್ನು ಸೋಮವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಮನರಂಜನಾ ಕೇಂದ್ರ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ, ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್, ಕುಂಬಳೆ ಗ್ರಾಮ ಪಂಚಾಯತಿ ಸ್ಥಾಯೀಸಮಿತಿ ಅಧ್ಯಕ್ಷೆ ಎಂ. ಸಾಬೂರ, ಬಿ.ಎ.ರಹಮಾನ್ ಆರಿಕ್ಕಾಡಿ, ಬ್ಲಾಕ್ ಪಂಚಾಯಿತಿ ಸದಸ್ಯೆ ಪ್ರೇಮ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಪ್ರೇಮಾವತಿ, ಶೋಭಾ ಯೂಸುಫ್ ಉಳುವಾರ್, ವಿದ್ಯಾಕಿರಣ ಜಿಲ್ಲಾ ಸಹಕಾರ್ಯದರ್ಶಿ ಸುನೀಲ್ ಕುಮಾರ್ ಮಾತನಾಡಿದರು. ಪಿಟಿಎ ಅಧ್ಯಕ್ಷ ಎ.ಕೆ. ಆರೀಫ್ ಸ್ವಾಗತಿಸಿದರು.