ಮುಳ್ಳೇರಿಯ: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಪಠ್ಯಕ್ಕೆ ಕನ್ನಡ ಭಾಷೆಯ ನಿಖರ ಜ್ಞಾನವಿಲ್ಲದ ಮಲಯಾಳಿ ಶಿಕ್ಷಕಿಯನ್ನು ನೇಮಿಸಿದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ, ಕನ್ನಡಿಗ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಹಾಗೂ ಕನ್ನಡ ಮಾತೃಭಾಷೆಯಾಗಿರುವ ಶಿಕ್ಷಕರನ್ನೇ ಪಠ್ಯಕ್ಕೆ ನೇಮಿಸಬೇಕಂದು ಒತ್ತಾಯಿಸಿ, ಜಯ ಗಳಿಸಿದ ಅಡೂರಿನ ಕನ್ನಡ ಹೋರಾಟ ಸಮಿತಿಯು ಕನ್ನಡ ಮಕ್ಕಳ ಹಿತ ಸಂರಕ್ಷಣೆ ಹಾಗೂ ಹೋರಾಟದ ಯಶಸ್ಸಿನ ಜತೆಗೆ ಇದೀಗ ಮತ್ತೊಮ್ಮೆ ಆದರ್ಶ ಮೆರೆದಿದೆ.
ಈ ಹೋರಾಟಕ್ಕೆ ಕನ್ನಡ ಪೋಷಕರೂ ಸೇರಿದಂತೆ ನೂರಾರು ಮಂದಿ ಕನ್ನಡ ಭಾಷಾಭಿಮಾನಿಗಳು ಸಕಾಲಿಕವಾಗಿ ಆರ್ಥಿಕ ಸಹಕಾರ ನೀಡಿದ್ದರು. ಮಲಯಾಳಿ ಶಿಕ್ಷಕಿಯ ನೇಮಕಾತಿಯ ವಿರುದ್ಧ ಕಾನೂನು ಹೋರಾಟದಲ್ಲಿ ಜಯಗಳಿಸಿದ ನಂತರ ಉಳಿಕೆಯಾದ ಹಣದಿಂದ ಅಡೂರಿನ ಕನ್ನಡ ಹೋರಾಟ ಸಮಿತಿಯು ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಇರಿಸುವ ನೂತನ ಕಪಾಟು ಹಾಗೂ ಒಂದು ಸಾವಿರ ರೂಪಾಯಿಗಳ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿತು. ಸುಜ್ಞಾನಯುತವಾದ ಪುಸ್ತಕಗಳು ಅಡೂರು ಸರ್ಕಾರಿ ಶಾಲೆಯ ಕನ್ನಡ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅತ್ಯಂತ ಉಪಯೋಗವಾಗಲಿದೆ. ಈ ಹೋರಾಟಕ್ಕೆ ಆರ್ಥಿಕ ಸಹಕಾರ ನೀಡಿ ಸಹಕರಿಸಿದ ಎಲ್ಲಾ ಬಂಧುಗಳಿಗೆ ಅಡೂರಿನ ಕನ್ನಡ ಹೋರಾಟ ಸಮಿತಿಯು ಕೃತಜ್ಞತೆ ಸಲ್ಲಿಸಿದೆ. ಅಡೂರು ಶಾಲೆಯಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನೂತನ ಕಪಾಟು ಹಾಗೂ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.