ತಿರುವನಂತಪುರ: ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ಟೀನ್ ಪರ ಕಾರ್ಯಕ್ರಮದಿಂದ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರನ್ನು ತೆಗೆದುಹಾಕಲು ಮುಸ್ಲಿಂ ಸಂಘಟನೆ 'ಮಹಲ್ ಎಂಪವರ್‌ಮೆಂಟ್ ಮಿಷನ್'(ಎಂಇಎಂ) ನಿರ್ಧರಿಸಿದೆ.
ಅಕ್ಟೋಬರ್ 30ರಂದು ತಿರುವನಂತಪುರದಲ್ಲಿ ಕಾರ್ಯಕ್ರಮ ನಡೆಸಲು ಎಂಇಎಂ ಯೋಜಿಸಿದೆ.
'ಈ ಬಗ್ಗೆ ತರೂರ್ ಅವರಲ್ಲಿ ಸಮಾಲೋಚನೆ ನಡೆಸಿದ್ದು, ಕಾರ್ಯಕ್ರಮದಿಂದ ಅವರನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ' ಎಂದು ಎಂಇಎಂ ಸಂಘಟನೆ ತಿಳಿಸಿದೆ.
ಏನಿದು ವಿವಾದ?
ಕೋಯಿಕ್ಕೋಡ್‌ನಲ್ಲಿ ಗುರುವಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಶಿ ತರೂರ್, 'ಹಮಾಸ್‌ನ ಭಯೋತ್ಪಾದನಾ ದಾಳಿಗೆ ಇಸ್ರೇಲ್ ಪ್ರತಿಕ್ರಿಯೆ ಸೂಕ್ತವಾಗಿಲ್ಲ' ಎಂದು ಹೇಳಿದ್ದರು.
ಹೇಳಿಕೆ ಬೆನ್ನಲ್ಲೇ ತರೂರ್ ಅವರು ಹಮಾಸ್ ಸಂಘಟನೆಯನ್ನು ಭಯೋತ್ಪಾದನೆ ಸಂಘಟನೆ ಎಂದು ಕರೆದಿದ್ದಾರೆ ಎಂದು ಸಿಪಿಎಂ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿರುವ ತರೂರ್, 'ನಾನು ಪಾಲೆಸ್ಟೀನ್ ಜನರ ಪರ ನಿಂತಿದ್ದು, ಇಸ್ರೇಲ್ ಅನ್ನು ತಾವು ಬೆಂಬಲಿಸಿದ್ದಾಗಿ ದಾರಿತಪ್ಪಿಸುವಂತಹ ಹೇಳಿಕೆಗಳು ಬಂದಿವೆ. ಇದು ಸರಿಯಲ್ಲ' ಎಂದಿದ್ದಾರೆ.