ಕಾಸರಗೋಡು: ನಿರಂತರ ಸಮುದ್ರ ಕೊರೆತದಿಂದ ಅಪಾರ ಹಾನಿ ಸಂಭವಿಸುತ್ತಿರುವ ಬೇಕಲ ಸನಿಹದ ತೃಕ್ಕನ್ನಾಡ್ ಸಮುದ್ರ ಕರಾವಳಿಯನ್ನು ಹಾಟ್‍ಸ್ಪಾಟ್ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ತಜ್ಞರ ಸಮಿತಿ ಭಾನುವಾರ ಭೇಟಿ ನೀಡಿ ಅವಲೋಕನ ನಡೆಸಿತು. ಚೆನ್ನೈ ಮೂಲದ ಕರಾವಳಿ ಸಂಶೋಧನೆಯ ವಿಜ್ಞಾನಿಗಳ ತಂಡ ರಾಷ್ಟ್ರೀಯ ಕರಾವಳಿ ಹಾಟ್‍ಸ್ಪಾಟ್‍ಗಳ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ನಿಟ್ಟಿನಲ್ಲಿ ತಜ್ಞ ತಂಡವನ್ನು ನಿಯೋಜಿಸಲಾಗಿದೆ.
ಕರಾವಳಿ ಸಂಶೋಧನೆಯ ವಿಜ್ಞಾನಿಗಳ ತಂಡ ತ್ರಿಕ್ಕನ್ನಾಡ್ ಮತ್ತು ವಲಿಯಪರಂಬ ಕರಾವಳಿಗೆ ಭೇಟಿ ನೀಡಿತು. ಎನ್‍ಸಿಸಿಆರ್‍ನ ವಿಜ್ಞಾನಿಗಳಾದ ಎಸ್.ಸುಬ್ಬುರಾಜ್, ಬಿ.ನಮಿತಾ, ಬಿ.ಶಿಲ್ಪಾ ಭೇಟಿ ನೀಡಿದ ತಂಡದಲ್ಲಿದ್ದ ತಜ್ಞರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಹಾಟ್‍ಸ್ಪಾಟ್ ಎಂದು ಘೋಷಿಸಲಾಗಿರುವ ವಲಿಯಪರಂಬಕ್ಕೆ ಭೇಟಿ ನೀಡಿದ ತಂಡವು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರ ಸೂಚನೆ ಮೇರೆಗೆ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ತ್ರಿಕ್ಕನ್ನಾಡಿಗೆ ಭೇಟಿ ನೀಡಿದೆ. ಪರಿಶೀಲನೆ ನಡೆಸಿದ ಕೇಂದ್ರ ತಜ್ಞರ ತಂಡ ವಿನ್ಯಾಸ ಸಿದ್ಧಪಡಿಸಿ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ ತಕ್ಷಣ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದರು. 25 ಕೋಟಿ ರೂ. ಯೋಜನಾವೆಚ್ಚದೊಂದಿಗೆ ಎರಡು ಕಿಲೋ ಮೀಟರ್‍ಉದ್ದದಲ್ಲಿ ಟೆಟ್ರಾಪಾಡ್ ವ್ಯವಸ್ಥೆಯಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ಶಾಸಕ ಸಿ.ಎಚ್.ಕುಞಂಬು, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಪ್ರಮುಖ ನೀರಾವರಿ ಕಾರ್ಯಪಾಲಕ ಎಂಜಿನಿಯರ್ ಪಿ.ರಮೇಶನ್ ತಂಡದ ಜತೆಗಿದ್ದರು.