ಬದಿಯಡ್ಕ: ಧಾರ್ಮಿಕವಾದ ಚಿಂತನೆಗಳು ಎಲ್ಲರನ್ನೂ ಒಂದುಗೂಡಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮಗ್ರಾಮಗಳಲ್ಲಿ ಧಾರ್ಮಿಕ ಕೇಂದ್ರಗಳು ಇರಬೇಕು. ದೈವಿಕ ಶಕ್ತಿಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ನಡೆದಾಗ ಊರಿನಲ್ಲಿ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಜರಗಿದ ಜೀರ್ಣೋದ್ಧಾರ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕುಂಟಿಕಾನ ಶಂಕರನಾರಾಯಣ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ.ಬಿ.ಕುಳಮರ್ವ ಮಾತನಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಎಲ್ಲರ ಸಹಭಾಗಿತ್ವ ಅತೀ ಅಗತ್ಯ. ಕೇವಲ ಒಂದು ಕೈಯಿಂದ ಆಗದ ಕೆಲಸ ಹತ್ತು ಕೈ ಜೊತೆಸೇರಿದಾಗ ನಡೆಯುತ್ತದೆ ಎಂಬುದು ಇಲ್ಲಿನ ಕಾರ್ಯಕರ್ತರ ಶ್ರಮದಾನದ ಮೂಲಕ ವ್ಯಕ್ತವಾಗಿದೆ ಎನ್ನುತ್ತಾ ಶ್ರೀಮಠದ ಒಳಾಂಗಣಕ್ಕೆ ಹಾಸುಗಲ್ಲಿನ ವ್ಯವಸ್ಥೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವುದಾಗಿ ಸಭೆಗೆ ತಿಳಿಸಿದರು. ಜೀರ್ಣೋದ್ಧಾರದ ಕುರಿತು ಮುಂದಿನ ಹಂತದ ಬಗ್ಗೆ ಚರ್ಚಿಸಲಾಯಿತು.
ನವಂಬರ್‍ನಲ್ಲಿ ರಾಘವೇಶ್ವರ ಶ್ರೀಗಳ ಭೇಟಿ:
ಕುಂಟಿಕಾನ ಮಠದ ಮನೆಯವರು, ಅಭಿವೃದ್ಧಿ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಊರವರೊಂದಿಗೆ ಇತ್ತೀಚೆಗೆ ಗೋಕರ್ಣಕ್ಕೆ ತೆರಳಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿಯಾಗಿ ಕುಂಟಿಕಾನ ಮಠಕ್ಕೆ ಆಗಮಿಸಲು ಭಿನ್ನವಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಕುಂಟಿಕಾನ ಮಠಕ್ಕೆ ಶೀಘ್ರದಲ್ಲಿ ಆಗಮಿಸುವುದಾಗಿ ಭರವಸೆಯನ್ನು ನೀಡಿ ಆಶೀರ್ವದಿಸಿದ್ದರು. ಅದರಂತೆ ನವಂಬರ್ ತಿಂಗಳಿನ ಮಧ್ಯಭಾಗದಲ್ಲಿ ಅವರು ಆಗಮಿಸಲಿರುವುದರಿಂದ ಅವರ ಮೊಕ್ಕಾಂ ವ್ಯವಸ್ಥೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಹಿರಿಯರಾದ ಅಭಿವೃದ್ಧಿ ಟ್ರಸ್ಟ್ ಉಪಾಧ್ಯಕ್ಷ ವಕೀಲ ವಾಶೆ ಶ್ರೀಕೃಷ್ಣ ಭಟ್, ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಕೆ.ಎಂ. ಹಾಗೂ ಊರವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಕೆ.ಯಂ. ಶ್ಯಾಮ ಭಟ್ ಸ್ವಾಗತಿಸಿದರು. ಕಳೆದ ಒಂದು ವಾರದಿಂದ ಊರವರು ಪ್ರತಿನಿತ್ಯ ಶ್ರಮದಾನದ ಮೂಲಕ ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ನಿರಂತರ ಶ್ರಮದಾನ ನಡೆಯುತ್ತಿದ್ದು ಮಾತೆಯರ ಸಹಿತ 50ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ.