ಮಂಗಳೂರು: ದಶಕಗಳಿಂದ ತೆಂಕು ತಿಟ್ಟಿನ ಯಕ್ಷಗಾನ ರಂಗದ ಮೇಲೆ ಕಾಣಿಸದೇ, ಅಳಿವಿನ ಅಂಚಿಗೆ ಸರಿಯುವ ಆತಂಕ ಎದುರಿಸುತ್ತಿರುವ ವಾಲಿ ಮತ್ತು ಸುಗ್ರೀವರ ಒಡ್ಡೋಲಗ ಇದೀಗ ಯುಟ್ಯೂಬ್‌ನಲ್ಲಿ ಲಭ್ಯ.
ಯಕ್ಷಗಾನ ಚಿಂತಕ, ಬಂಟ್ವಾಳದ ರಾಜಗೋಪಾಲ್ ಕನ್ಯಾನ ಅವರು ಅಧ್ಯಯನ ಮತ್ತು ಸಂಶೋಧನೆ ನಡೆಸಿ ಅನುಭವಿ ಕಲಾವಿದ ಗೋವಿಂದ ಭಟ್ ಸೂರಿಕುಮೇರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಳಿಸಿದ ವಿಡಿಯೊವನ್ನು ಗುರುವಾರ ಬಿಡುಗಡೆ ಮಾಡಲಾಯಿತು.
ಪೈವಳಿಕೆಯಲ್ಲಿ ಪಾರಂಪರಿಕ ಶೈಲಿಯ ಪ್ರದರ್ಶನವನ್ನು ಏರ್ಪಡಿಸಿ ಒಡ್ಡೋಲಗವನ್ನು ಚಿತ್ರೀಕರಿಸಲಾಗಿದ್ದು ಗೋವಿಂದ ಭಟ್ಟ ಅವರ ಶಿಷ್ಯ ಧರ್ಮೇಂದ್ರ ಆಚಾರ್ಯ ಮತ್ತು ಸಂಗಡಿಗರು ಪಾತ್ರ ಮಾಡಿದ್ದಾರೆ. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್ (ಭಾಗವತಿಕೆ), ಲಕ್ಷ್ಮೀಶ ಬೆಂಗ್ರೋಡಿ ಮತ್ತು ಶುಭಶರಣ ತಾಳ್ತಜೆ (ಮದ್ದಳೆ), ಮುರಾರಿ ಕಡಂಬಳಿತ್ತಾಯ (ಚೆಂಡೆ) ಮತ್ತು ಕಿರಣ್ ಕುದ್ರೆಕೋಡ್ಲು (ಚಕ್ರತಾಳ) ಪಾಲ್ಗೊಂಡಿದ್ದಾರೆ ಎಂದು ರಾಜಗೋಪಾಲ್ ಕನ್ಯಾನ ತಿಳಿಸಿದರು.
ಮಧುಸೂದನ ಅಲೆವೂರಾಯ ಅವರ ಯುಟ್ಯೂಬ್ ಚಾನಲ್‌ನಲ್ಲಿ (https://youtube.com/@madhusudanaalewoor) ವಿಡಿಯೊ ಲಭ್ಯವಿದೆ. ಪ್ರಸಂಗ, ಸಂದರ್ಶನ ಮತ್ತು ಹೇಳಿಕೆಗಳನ್ನು ಒಳಗೊಂಡ 1.15 ನಿಮಿಷಗಳ ದೈರ್ಘ್ಯವಿದೆ ಎಂದು ಅವರು ವಿವರಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ವಿಡಿಯೊ ಬಿಡುಗಡೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಪಟು ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಬದಲಾವಣೆಗಳಿಗೆ ಒಳಗಾಗಿ ಯಕ್ಷಗಾನ ಈಗ ಉದ್ಯಮವಾಗಿ ಮಾರ್ಪಟ್ಟಿದೆ. ಇಂಥ ಸಂದರ್ಭದಲ್ಲಿ ಈ ರೀತಿಯ ಪ್ರಯೋಗಗಳು ಈ ಕಲೆಯ ಪುನರುಜ್ಜೀವನಕ್ಕೆ ನೆರವಾಗಲಿದೆ ಎಂದರು.
ಗೋವಿಂಧ ಭಟ್ ಮಾತನಾಡಿ ಶಾಲೆಗಳಲ್ಲಿ ಯಕ್ಷಗಾನ ಕಲಿಸುವ ಯೋಜನೆ ಸೂಕ್ತ ಶಿಕ್ಷಕರು ಸಿಗದೆ ನನೆಗುದಿಗೆ ಬಿದ್ದಿರುವುದು ಬೇಸರದ ವಿಷಯ ಎಂದರು. ಯಕ್ಷಾರಾಧನಾ ಕಲಾಕೇಂದ್ರದ ನಿರ್ದೇಶಕಿ ಸುಮಂಗಲಾ ರತ್ನಾಕರ್ ಇದ್ದರು.