ಕುಂಬಳೆ: ದೇವಾಲಯಗಳು ಸಮಾಜಮುಖಿ ಚಟುವಟಿಕೆಯೊಂದಿಗೆ ಭಕ್ತಾದಿಗಳ ಸೌಹಾರ್ದ ತಾಣಗಳಾಗಬೇಕು ಎಂದು ಮಲಬಾರ್ ದೇವಸ್ವಂ ಮಂಡಳಿ ಅಧ್ಯಕ್ಷ ಎಂ.ಆರ್. ಮುರಳಿ ತಿಳಿಸಿದ್ದಾರೆ.
ಅವರು ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಚೇರಿಯನ್ನೊಳಗೊಂಡ ನೂತನ ಸೇವಾಕೌಂಟರ್‍ನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇವಾಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿದಾಗ ಭಕ್ತಾದಿಗಳ ಸಂದರ್ಶನ ಹೆಚ್ಚಾಗಿ, ದೇವಾಲಯದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ದೇವಸ್ವಂ ಮಂಡಳಿ ಸಿಬ್ಬಂದಿಯ ಕಲ್ಯಾಣಕ್ಕೆ ಮಂಡಳಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ನೌಕರರ ಬಾಕಿ ವೇತನ ಬಿಡುಗಡೆಗೂ ಮಂಡಳಿ ಗಮನಹರಿಸಿರುವುದಾಘಿ ತಿಳಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಅನುವಂಶಿಕ ಟ್ರಸ್ಟಿ ವಕೀಲ ರಾಜೇಂದ್ರ ರಾವ್ ಮಾಯಿಪ್ಪಾಡಿ, ಸಹಾಯಕ ಆಯುಕ್ತ ಪ್ರದೀಪ್ ಕುಮಾರ್, ದೇವಸ್ವಂ ಮಂಡಳಿ ಪ್ರದೇಶ ಸಮಿತಿ ಸದಸ್ಯ ಶಂಕರ್ ರೈ, ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಎಂ. ಮಂಜುನಾಥ ಆಳ್ವ, ಕಾರ್ಯದರ್ಶಿ ಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಸುನೀಲಕುಮಾರ್ ಸ್ವಾಗತಿಸಿದರು. ಶಂಕರ ಆಳ್ವ ಕಾರ್ಯಕ್ರಮ ನಿರೂಪಿಸಿದರು. ದಾಮೋದರ ದೇಲಂಪಾಡಿ ವಂದಿಸಿದರು.