ತೈಪೆ: ಸುಮಾರು ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ಅವರನ್ನು ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಇದಕ್ಕು ಮುನ್ನ ಚೀನಾ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಾಪತ್ತೆಯಾಗಿದ್ದರು ಮತ್ತು ಅವರನ್ನು ಸಹ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇದೀಗ ಮತ್ತೊಬ್ಬ ಸಚಿವರನ್ನು ವಜಾಗೊಳಿಸಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಸಂಪುಟ ಪುನರ್ರಚನೆಯ ಸಮಯದಲ್ಲಿ ರಕ್ಷಣಾ ಸಚಿವರಾದ ಲಿ, ಆಗಸ್ಟ್ 29 ರಂದು ಭಾಷಣ ಮಾಡಿದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕ್ವಿನ್ ಮತ್ತು ಲೀ ಅವರ ಕಣ್ಮರೆಗಳು ಚೀನಾದ ವಿದೇಶಾಂಗ ಅಥವಾ ರಕ್ಷಣಾ ನೀತಿಗಳಲ್ಲಿ ಯಾವುದೇ ಬದಲಾವಣೆ ತರುವ ಸೂಚನೆ ಇಲ್ಲ ಎಂದು ವರದಿ ತಿಳಿಸಿದೆ.
ಸುಮಾರು ಎರಡು ತಿಂಗಳ ಹಿಂದೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್‌ನಿಂದ ಇಬ್ಬರು ಉನ್ನತ ಜನರಲ್‌ಗಳನ್ನು ತೆಗೆದುಹಾಕಿದ್ದರು. ಇದು ದೇಶದ ಸಾಂಪ್ರದಾಯಿಕ ಮತ್ತು ಪರಮಾಣು ಕ್ಷಿಪಣಿಗಳ ಮೇಲ್ವಿಚಾರಣೆ ಮಾಡುವ ಗಣ್ಯ ಪಡೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ಶಾಂಗ್‌ಪು ನಾಪತ್ತೆ ಇನ್ನಷ್ಟು ಅನುಮಾನಗಳಿಗೆ ಪುಷ್ಟಿ ನೀಡಿದೆ.
ಸ್ಟೇಟ್ ಕೌನ್ಸಿಲ್, ಚೀನಾ ಕ್ಯಾಬಿನೆಟ್ ಮತ್ತು ಸರ್ಕಾರದ ಅಧಿಕಾರ ಕೇಂದ್ರದಿಂದ ಲಿ ಮತ್ತು ಕ್ವಿನ್ ಇಬ್ಬರನ್ನೂ ತೆಗೆದುಹಾಕಲಾಗಿದೆ ಎಂದು ಸ್ಟೇಟ್ ಬ್ರಾಡ್‌ಕಾಸ್ಟರ್ ಸಿಸಿಟಿವಿ ಪ್ರಕಟಣೆ ತಿಳಿಸಿದೆ.
ಚೀನಾದ ಈ ನಿರ್ಧಾರದಿಂದ ಲಿ ಮತ್ತು ಕ್ವಿನ್ ಇಬ್ಬರ ರಾಜಕೀಯ ಜೀವನ ಅಂತ್ಯವಾಗಲಿದೆ. ಆದರೆ ಅವರ ವಿರುದ್ಧ ಕಾನೂನು ಕ್ರಮ ಅಥವಾ ಇತರ ಕಾನೂನು ನಿರ್ಬಂಧಗಳನ್ನು ಎದುರಿಸುತ್ತಾರೆಯೇ ಎಂಬುದು ಅಸ್ಪಷ್ಟವಾಗಿದೆ.