ನವದೆಹಲಿ : ನಿಸರ್ಗ ತಜ್ಞ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದ ಹಾಗೂ ಭೌತವಿಜ್ಞಾನಿ ಐನ್‌ಸ್ಟೈನ್‌ರ ವಿಶೇಷ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತು. 'ವಿಜ್ಞಾನ ಸಿದ್ಧಾಂತಗಳು ತಪ್ಪಾದರೆ, ಅದಕ್ಕೆ ನಾವೇನು ಮಾಡಲು ಸಾಧ್ಯ' ಎಂದು ಪ್ರಶ್ನೆ ಮಾಡಿತು.
ವೈಜ್ಞಾನಿಕ ನಂಬಿಕೆಗಳನ್ನು ಪ್ರಶ್ನಿಸಲು ಭಾರತೀಯ ಸಂವಿಧಾನದ 32ನೇ ವಿಧಿಯಡಿ (ಭಾರತದ ಯಾವುದೇ ವ್ಯಕ್ತಿಯು ತನ್ನ ಹಕ್ಕುಗಳ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು) ರಿಟ್ ಅರ್ಜಿ ಸಲ್ಲಿಸಲು ಅವಕಾಶಗಳು ಇಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ತಿಳಿಸಿತು.
'ಡಾರ್ವಿನ್ ಜೀವವಿಕಾಸವಾದ ಮತ್ತು ಐನ್‌ಸ್ಟೈನ್‌ನ ಸಮೀಕರಣ ತಪ್ಪು ಎಂದು ಸಾಬೀತುಪಡಿಸಲು ಅರ್ಜಿದಾರ ಬಯಸುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಒಂದು ವೇದಿಕೆ ಬೇಕಾಗಿದೆ. ಆ ಎರಡೂ ಸಿದ್ದಾಂತಗಳೂ ತಪ್ಪೆಂದು ಅರ್ಜಿದಾರ ಭಾವಿಸಿದ್ದರೆ, ತಮ್ಮದೇ ಸ್ವತಂತ್ರ ವಾದವನ್ನು ಪ್ರಚಾರ ಮಾಡಿಕೊಳ್ಳಲಿ. ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಇಂಥ ಅರ್ಜಿಗೆ ಅವಕಾಶವಿಲ್ಲ' ಎಂದು ಕೋರ್ಟ್ ಹೇಳಿತು.
ಪಿಐಎಲ್ ವಿಚಾರಣೆಗೆ ಬರುತ್ತಿದ್ದಂತೆ, ಕೇಸರಿ ಬಟ್ಟೆಯನ್ನು ಧರಿಸಿ ನ್ಯಾಯಾಲಯಕ್ಕೆ ಬಂದ ಅರ್ಜಿದಾರ ರಾಜ್ ಕುಮಾರ್ 'ಶಾಲೆ ಮತ್ತು ಕಾಲೇಜಿನಲ್ಲಿ ಡಾರ್ವಿನ್ ಸಿದ್ಧಾಂತ ಮತ್ತು ಐನ್‌ಸ್ಟೈನ್ ಬಗ್ಗೆ ಅಧ್ಯಯನ ಮಾಡಿದ್ದೇನೆ. ಆದರೆ ನಾನು ಓದಿರುವುದೆಲ್ಲವೂ ತಪ್ಪು' ಎಂದು ಪ್ರತಿಪಾದಿಸಿದರು.
ಆಗ ಪೀಠವು, 'ಅದಕ್ಕೆ ನಾವೇನು ಮಾಡಲು ಸಾಧ್ಯವಿದೆ? ನೀವು ಬೇಕಿದ್ದರೆ ನಿಮ್ಮದೇ ಸಿದ್ಧಾಂತವನ್ನು ರೂಪಿಸಿ' ಎಂದು ಸುಪ್ರೀಂ ಕೋರ್ಟ್ ಹೇಳಿತು.
ನಿಸರ್ಗತಜ್ಞ ಡಾರ್ವಿನ್ ಪ್ರಸ್ತಾಪಿಸಿದ ವಿಕಾಸವಾದವು ಎಲ್ಲಾ ಜೀವಿಗಳು ನೈಸರ್ಗಿಕ ಆಯ್ಕೆಯ ಮೂಲಕ ವಿಕಸನಗೊಂಡಿವೆ ಎಂದು ಹೇಳುತ್ತದೆ. ಸಣ್ಣ ಕಣದಿಂದ ಅಥವಾ ಪರಮಾಣುವಿನಿಂದ (matter) ಅಪಾರವಾದ ಶಕ್ತಿಯನ್ನು ಹೊರ ತೆಗೆಯಲು ಸಾಧ್ಯವಿದೆ ಎಂದು ಐನ್‌ಸ್ಟೈನ್ ತನ್ನ E=MC2 ಸಮೀಕರಣದಲ್ಲಿ ತಿಳಿಸಿದ್ದಾರೆ.