ಏಕತಾ ನಗರ: ಗುಜರಾತ್‌ನ ಮೊದಲ ಪಾರಂಪರಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಚಾಲನೆ ನೀಡಿದ್ದಾರೆ.
ಮೂರು ಬೋಗಿಗಳನ್ನು ಹೊಂದಿರುವ ಈ ರೈಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ಇರುವ ಏಕತಾ ನಗರದಿಂದ ಅಹಮದಾಬಾದ್‌ಗೆ ಸಂಪರ್ಕ ಕಲ್ಪಿಸಲಿದೆ.
'ರೈಲಿಗೆ ಚಾಲನೆ ನೀಡುವ ಮೊದಲು ಮಾತನಾಡಿದ ಮೋದಿ, ಇದು ಏಕತಾ ನಗರದಲ್ಲಿನ ಆಕರ್ಷಣೆಗೆ ಹೊಸ ಸೇರ್ಪಡೆಯಾಗಿದೆ. ಈ ರೈಲು ಭವ್ಯ ಪರಂಪರೆಯ ಪ್ರತಿಬಿಂಬವಾಗಿದ್ದು, ಇದನ್ನು ಅತ್ಯಾಧುನಿಕ ಸೌಕರ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕೆವಾಡಿಯಾವನ್ನು ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.
ರೈಲಿನ ವಿಶೇಷತೆಗಳು: ರೈಲಿನಲ್ಲಿ ಹೊಗೆ ಹೊರಸೂಸಲು ಫಾಗರ್‌ಗಳು ಹಾಗೂ ಲೊಕೊಮೋಟಿವ್‌ನ ಶಬ್ಧ ಉತ್ಪಾದಿಸಲು ವಿಶೇಷ ವ್ಯವಸ್ಥೆ ಇದೆ. ರೈಲಿನ ಮುಂಭಾಗದಲ್ಲಿ ಒಂಬತ್ತು ಮೀಟರ್ ಉದ್ದದ ಸ್ಟೀಮ್ ಬಾಯ್ಲರ್ ಆಕಾರದ ರಚನೆಯನ್ನು ಮಾಡಲಾಗಿದೆ.
ಪ್ರತಿ ಬೋಗಿಯಲ್ಲಿ 48 ಆಸನಗಳಿವೆ. 28 ಆಸನ ಸಾಮರ್ಥ್ಯವುಳ್ಳ ಬೋಗಿಯಲ್ಲಿ ಎಸಿ ರೆಸ್ಟೋರೆಂಟ್ ಇದ್ದು, ತೇಗದ ಮರದ ಡೈನಿಂಗ್ ಟೇಬಲ್‌ಗಳು ಮತ್ತು ಎರಡು ಆಸನಗಳ ಮೆತ್ತನೆಯ ಸೋಫಾಗಳಲ್ಲಿ ಕುಳಿತು ಪ್ರಯಾಣಿಕರು ಚಹಾ ಮತ್ತು ತಿಂಡಿಗಳನ್ನು ಸವಿಯಬಹುದು.
ರೈಲಿನ ಎಲ್ಲಾ ಕೋಚ್‌ಗಳನ್ನು ತೇಗದ ಮರಗಳಿಂದ ವಿನ್ಯಾಗೊಳಿಸಲಾಗಿದ್ದು, ಚೆನ್ನೈನ ಪೆರಂಬೂರ್‌ನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ.
ರೈಲಿನ ಸಮಯ ಮತ್ತು ದರ: ರೈಲು ಬೆಳಿಗ್ಗೆ ಸುಮಾರು 6.10ಕ್ಕೆ ಅಹಮದಾಬಾದ್‌ನಿಂದ ಹೊರಟು 9.50 ಗಂಟೆಗೆ ಏಕತಾ ಪ್ರತಿಮೆಯ ನೆಲೆಯಾಗಿರುವ ಕೆವಾಡಿಯಾದ ಏಕತಾ ನಗರ ರೈಲು ನಿಲ್ದಾಣವನ್ನು ತಲುಪಲಿದೆ. ಮತ್ತೆ, ಏಕತಾ ನಗರದಿಂದ ರಾತ್ರಿ 8.23ಕ್ಕೆ ಹೊರಟು ಮಧ್ಯರಾತ್ರಿ 12.05ಕ್ಕೆ ಅಹಮದಾಬಾದ್ ನಗರವನ್ನು ಸೇರಲಿದೆ. ರೈಲಿನ ಏಕಮುಖ ಪ್ರಯಾಣ ದರ ₹885 ಇರಲಿದೆ.
ಏಕತಾ ನಗರ ಮತ್ತು ಅಹಮದಾಬಾದ್ ನಡುವೆ ಸುಮಾರು 182 ಕಿ.ಮೀ ಅಂತರವಿದ್ದು, ಪ್ರಯಾಣದ ಮಧ್ಯದಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ.
'ನವೆಂಬರ್ 5 ರಿಂದ ವಾರಕ್ಕೆ ಒಂದು ದಿನ (ಭಾನುವಾರ) ಈ ರೈಲು ಕಾರ್ಯಾಚರಣೆ ನಡೆಸಲಿದೆ. ಜನರ ಪ್ರತಿಕ್ರಿಯೆ ನೋಡಿ ಕಾರ್ಯಾಚರಣೆ ಹೆಚ್ಚಳದ ಬಗ್ಗೆ ನಿರ್ಧರಿಸಲಾಗುವುದು' ಎಂದು ವಡೋದರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಜಿತೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.
ಭಾರತವು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ನೀಲಗಿರಿ ಮೌಂಟೇನ್ ರೈಲ್ವೆ, ಕಂಗ್ರಾ ವ್ಯಾಲಿ ರೈಲ್ವೆ, ಕಲ್ಕಾ-ಶಿಮ್ಲಾ ರೈಲ್ವೆ, ಮಾಥೆರಾನ್ ಹಿಲ್ ರೈಲ್ವೆ ಸೇರಿದಂತೆ ಹಲವಾರು ಪಾರಂಪರಿಕ ರೈಲುಗಳನ್ನು ಹೊಂದಿದೆ.