ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಖೀರಿಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರಕ್ಕೆ ಮಂಗಳವಾರ ಎರಡು ವರ್ಷ ತುಂಬಲಿದೆ.
ಆದರೆ, ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಗೂ ಕಾನೂನು ಕ್ರಮಕೈಗೊಂಡಿಲ್ಲ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ನೀತಿಗಳನ್ನು ವಾಪಸ್ ಪಡೆಯುವಂತೆ ಹೋರಾಟ ನಡೆಸುತ್ತಿದ್ದವರ ಮೇಲೆ 2021ರ ಅಕ್ಟೋಬರ್ 3ರಂದು ಸಚಿವರ ಪುತ್ರ ಏಕಾಏಕಿ ಕಾರು ಹರಿಸಿದ್ದರಿಂದ ನಾಲ್ವರು ರೈತರು ಮೃತಪಟ್ಟಿದ್ದರು.
ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕ್ರಮಕ್ಕೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಕೇಂದ್ರ ವ್ಯಾಪಾರ ಒಕ್ಕೂಟಗಳು ಜಂಟಿಯಾಗಿ ಹೋರಾಟಕ್ಕೆ ನಿರ್ಧರಿಸಿವೆ.
ದೇಶದಾದ್ಯಂತ ಕರಾಳ ದಿನ ಆಚರಣೆಗೆ ನಿರ್ಧರಿಸಲಾಗಿದೆ. ರೈತರು ಹಾಗೂ ರೈತ ಒಕ್ಕೂಟದ ಕಾರ್ಯಕರ್ತರಿಂದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ ನಡೆಯಲಿವೆ.
ಕೇಂದ್ರ ಸರ್ಕಾರವು ಜನತಂತ್ರ ವ್ಯವಸ್ಥೆ ಮೇಲೆ ದಾಳಿ ನಡೆಸುತ್ತಿದೆ. ಆ ಮೂಲಕ ಜನರ ಹಕ್ಕುಗಳನ್ನು ದಮನ ಮಾಡಲು ಯತ್ನಿಸಲಾಗುತ್ತಿದೆ. ಇದನ್ನು ಖಂಡಿಸಿ ಕರಾಳ ದಿನ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಲಖೀಂಪುರ ಖೀರಿ ಹಿಂಸಾಚಾರದ ಹಿಂದೆ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಶ್ ಮಿಶ್ರಾ ಅವರ ಪಿತೂರಿ ಅಡಗಿದೆ. ರೈತರ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಹೆಣೆದ ಭಾಗವಾಗಿ ಈ ಕೃತ್ಯ ಎಸಗಿದ್ದಾರೆ. ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ರೈತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಪ್ರಧಾನಿ ಮೋದಿ ಅವರು, ಘಟನೆ ಬಗ್ಗೆ ಸಚಿವರನ್ನು ಪ್ರಶ್ನಿಸಿಲ್ಲ. ರೈತರ ಹತ್ಯೆ ಕುರಿತ ಎಫ್‌ಐಆರ್‌ನಲ್ಲಿ ಸಚಿವರ ಹೆಸರಿದೆ. ಆದರೆ, ತಪ್ಪಿತಸ್ಥರನ್ನು ಪ್ರಧಾನಿ ಅವರೇ ರಕ್ಷಿಸುತ್ತಿದ್ದಾರೆ ಎಂದು ದೂರಿದೆ.
ಬಿಜೆಪಿ ಹಾಗೂ ಬಲಪಂಥೀಯ ಸರ್ಕಾರಗಳಿರುವ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಕಾರ್ಮಿಕರು, ರೈತರು ಸೇರಿದಂತೆ ದುಡಿಯುವ ವರ್ಗದ ಜನರ ಧ್ವನಿ ಅಡಗಿಸಲು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಹಲವು ಕಾನೂನುಗಳನ್ನು ಪ್ರಯೋಗಿಸಲಾಗುತ್ತಿದೆ. ನಾಗರಿಕ ಹಕ್ಕುಗಳ ದಮನಕಾರಿ ನೀತಿ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದೆ.