ಕಂಕೆರ್ : ಭದ್ರಾತಾ ಪಡೆಗಳು ಹಾಗೂ ನಕ್ಸಲರ ನಡುವೆ ಕಂಕೆರ್ ಜಿಲ್ಲೆಯಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಯಲಿಬೆಡ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ರಾಜ್ಯ ಪೊಲೀಸ್ ತಂಡ ಹಾಗೂ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಇಂದು ಬೆಳಿಗ್ಗೆ ನಕ್ಸಲ್ ವಿರೋಧಿ ಕಾರ್ಯಾಚರಣೆ ಆರಂಭಿಸಿದ್ದವು.
ನಕ್ಸಲರು ಹತರಾದ ಸ್ಥಳದಲ್ಲಿ ರೈಫಲ್‌ಗಳು, ಸ್ಫೋಟಕಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತರ ಗುರುತು ಸದ್ಯ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಹೇಳಿದ್ದಾರೆ.
ಕಂಕೆರ್‌ನ ಮೂರು ಕ್ಷೇತ್ರಗಳಲ್ಲಿ ನವೆಂಬರ್ 7ರಂದು ಮತದಾನ
90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಮತ್ತು 2ನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆಸಲು ಉದ್ದೇಶಿಸಲಾಗಿದೆ.
ಸದ್ಯ ಎನ್‌ಕೌಂಟರ್ ನಡೆದಿರುವ ಕಂಕೆರ್ ಜಿಲ್ಲೆಯಲ್ಲಿರುವ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ಬಿಜಾಪುರದಲ್ಲಿ ಎನ್‌ಕೌಂಟರ್
ಭದ್ರಾತಾ ಪಡೆಗಳು ಹಾಗೂ ನಕ್ಸಲರ ನಡುವೆ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ ಹತನಾಗಿದ್ದ.
ಮಡ್ಡೆದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಂದೆಪರಾ ಗ್ರಾಮದ ಸಮೀಫದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಜಂಟಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ ಗುಂಡಿನ ಚಕಮಕಿ ನಡೆದಿತ್ತು.