HEALTH TIPS

ರೋಗದ ಅಪಾಯ: ನ್ಯೂಸ್ ಪೇಪರ್ ನಲ್ಲಿ ಆಹಾರ ಪದಾರ್ಥ ನೀಡುವುದನ್ನು ನಿಲ್ಲಿಸಿ; ಮಾರಾಟಗಾರರಿಗೆ FSSAI ಎಚ್ಚರಿಕೆ

               ನವದೆಹಲಿ: ದಿನಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ಶನಿವಾರ ತಾಕೀತು ಮಾಡಿದೆ‌.

             ಪತ್ರಿಕೆಗಳಲ್ಲಿಟ್ಟು ಆಹಾರಗಳನ್ನು ಕೊಡುವುದು, ಸಂಗ್ರಹಿಸುವುದು ಅನೇಕ ಜನರಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಮಾರಾಟಗಾರರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು FSSAI ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಮಲಾ ವರ್ಧನಾ ರಾವ್ ಅವರು ಆದೇಶಿಸಿದ್ದಾರೆ.

             ಅಲ್ಲದೆ ಈ ನಿಯಮಾವಳಿಯನ್ನು FSSAI, ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರಗಳ ಜೊತೆ ಜಂಟಿಯಾಗಿ ನಿಗಾ ಇಡಲಿದೆ ಎಂದು ಹೇಳಿದ್ದಾರೆ.

                 ಪತ್ರಿಕೆಗಳಿಗೆ ಬಳಸುವ ಇಂಕ್‌ನಲ್ಲಿ ಸೀಸ ಇನ್ನಿತರ ರಸಾಯನಿಕಗಳು ಇರುವುದರಿಂದ ಇವು ಆಹಾರಗಳ ಮೂಲಕ ಮಾನವ ದೇಹವನ್ನು ಸೇರುವ ಸಂಭವವಿದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಇತರೆ ಮಾರಣಾಂತಿಕ ರೋಗಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಆಹಾರಗಳನ್ನು ಹಾಕಿ ಕೊಡಲು, ಸಂಗ್ರಹಿಸಲು ಪತ್ರಿಕೆಗಳನ್ನು ಬಳಸಬಾರದು. ಬದಲಿಗೆ ಆರೋಗ್ಯಕರ ಉತ್ಪನ್ನಗಳನ್ನು ಬಳಸಬೇಕು ಎಂದು ಮಾರಾಟಗಾರರಿಗೆ ಸಲಹೆ ನೀಡಿದೆ.

                 ಆಹಾರದಲ್ಲಿನ ಎಣ್ಣೆ ಪತ್ರಿಕೆಗಳಿಗೆ ಬಳಸಲಾದ ಇಂಕ್‌ನಲ್ಲಿನ ರಸಾಯನಿಕಗಳನ್ನು ಹೀರುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಮಾನವನಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಇದಲ್ಲದೆ ವಿತರಣೆಯ ಸಮಯದಲ್ಲಿ ಪೇಪರ್ ಗಳು ಸಾಮಾನ್ಯವಾಗಿ ವಿವಿಧ ಪರಿಸರ ಪರಿಸ್ಥಿತಿಗಳಿಗೆ ಒಳಗಾಗುತ್ತವೆ, ಅವು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಆಹಾರಕ್ಕೆ ವರ್ಗಾವಣೆಯಾಗುವ ಇತರ ರೋಗಕಾರಕಗಳಿಂದ ಮಾಲಿನ್ಯಕ್ಕೆ ಒಳಗಾಗುತ್ತವೆ, ಇದು ಆಹಾರದಿಂದ ಹರಡುವ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು FSSAI ಎಚ್ಚರಿಸಿದೆ.

                                          ನಿಯಮ ಏನು ಹೇಳುತ್ತದೆ?
              ಆಹಾರ ನಿಯಂತ್ರಕ ಸಂಸ್ಥೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಗಳು, 2018 ಅನ್ನು ಸಹ ಸೂಚಿಸಿದೆ, ಇದು ಆಹಾರವನ್ನು ಸಂಗ್ರಹಿಸಲು, ಪ್ಯಾಕಿಂಗ್ ಮಾಡಲು ಅಥವಾ ಸುತ್ತಿಡಲು ಪತ್ರಿಕೆಗಳು ಅಥವಾ ಅಂತಹುದೇ ವಸ್ತುಗಳನ್ನು ಬಳಸುವುದನ್ನು ನಿಷೇಧಿಸುತ್ತದೆ. ನಿಯಮದ ಪ್ರಕಾರ, ಗ್ರಾಹಕರು ಮತ್ತು ಮಾರಾಟಗಾರರು ಖಾದ್ಯ ವಸ್ತುಗಳನ್ನು ಕವರ್ ಮಾಡಲು ಅಥವಾ ಪೂರೈಸಲು ಪತ್ರಿಕೆಗಳನ್ನು ಬಳಸುವಂತಿಲ್ಲ.

                ಪ್ರಮುಖವಾಗಿ ಸಮೋಸಾ, ಬಜ್ಜಿ ಅಥವಾ ಪಕೋಡಾಗಳಂತಹ ಕರಿದ ಆಹಾರಗಳನ್ನು ಪಾರ್ಸೆಲ್ ಮಾಡಲು ಅಥವಾ ನೀಡಲು ಪೇಪರ್ ಬಳಸುವಂತಿಲ್ಲ. ಎಣ್ಣೆಯಲ್ಲಿ ಕರಿದ ಇಂತಹ ಆಹಾರ ಪದಾರ್ಥಗಳ ಹೆಚ್ಚುವರಿ ಎಣ್ಣೆಯನ್ನು ಪತ್ರಿಕೆಗಳು ಹೀರಿಕೊಳ್ಳುತ್ತವೆ. ಈ ವೇಳೆ ಪೇಪರ್ ನಲ್ಲಿನ ರಾಸಾಯನಿಕಗಳು ಆಹಾರ ಪದಾರ್ಥಕ್ಕೆ ಸೇರುತ್ತದೆ. ಹೀಗಾಗಿ ಪತ್ರಿಕೆಗಳನ್ನು ಬಳಸಬಾರದು ಎಂದು ಹೇಳಿದೆ.

                  ಪತ್ರಿಕೆಗಳನ್ನು ಯಾರೂ ಆಹಾರವನ್ನು ಬಡಿಸಲು ಅಥವಾ ಪ್ಯಾಕ್ ಮಾಡಲು ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಫ್‌ಎಸ್‌ಎಸ್‌ಎಐ ಈಗ ರಾಜ್ಯ ಆಹಾರ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಗಳ ಬಳಕೆ ನಿಲ್ಲಿಸಿ ಸುರಕ್ಷಿತ ಪರ್ಯಾಯಗಳನ್ನು ಉತ್ತೇಜಿಸುವ ಮೂಲಕ, FSSAI ದೇಶದಲ್ಲಿ ಸರಬರಾಜು ಮಾಡುವ ಆಹಾರದ ಸುರಕ್ಷತೆಯನ್ನು ಖಾತ್ರಿಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಿದೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries