ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಇಂದು (ಭಾನುವಾರ) ಕ್ರೈಸ್ತರು ಪ್ರಾರ್ಥನಾ ಸಭೆ ನಡೆಸುತ್ತಿದ್ದ ಕನ್ವೆನ್ಷನ್ ಸೆಂಟರ್‌ನಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೊಚ್ಚಿಯಿಂದ ಈಶಾನ್ಯಕ್ಕೆ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕಲಮಸ್ಸೆರಿಯ 'ಯಹೋವನ ಸತ್ಯಗಳು ಕಾರ್ಯಕ್ರಮ'ದಲ್ಲಿ ಬೆಳಿಗ್ಗೆ 9.40ಕ್ಕೆ ಈ ಘಟನೆ ನಡೆದಿದೆ.
ಸಭಾ ಭವನದ ಒಳಗೆ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆ ನಡೆದ ಕೆಲವು ತಾಸುಗಳ ಬಳಿಕ, ಯಹೋವನ ಸಾಕ್ಷಿಗಳು ಪಂಥದ ಸದಸ್ಯನೆಂದು ಹೇಳಿಕೊಂಡ 48 ವರ್ಷ ವಯಸ್ಸಿನ ಡಾಮಿನಿಕ್ ಮಾರ್ಟಿನ್ ಎಂಬಾತ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, 'ಸ್ಫೋಟಕ್ಕೆ ನಾನೇ ಕಾರಣ' ಎಂದು ಹೇಳಿಕೊಂಡಿದ್ದಾನೆ ಎಂದು ಕೇರಳದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ತಿಳಿಸಿದ್ದಾರೆ.
ಗಾಯಗೊಂಡ 51 ಜನರ ಪೈಕಿ 30 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಅವರಲ್ಲಿ 18 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅವರಲ್ಲಿ ಮೂವರಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ತ್ರಿಶೂರ್ ಮತ್ತು ಕೊಟ್ಟಾಯಂ ವೈದ್ಯಕೀಯ ಕಾಲೇಜುಗಳಿಂದ ತಜ್ಞ ವೈದ್ಯರ ತಂಡಗಳು ಕಲಮಶೇರಿ ವೈದ್ಯಕೀಯ ಕಾಲೇಜಿಗೆ ಬಂದಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
'ಕಲಮಶೇರಿಯ ಜಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಫೋಟಕ್ಕೆ ಕಚ್ಚಾ ಬಾಂಬ್ ಬಳಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ' ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಶೇಖ್ ದರ್ವೇಶ್ ಸಾಹೇಬ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದು ಭಯೋತ್ಪಾದಕ ದಾಳಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಜಿಪಿ, 'ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ತನಿಖೆ ಬಳಿಕವೇ ಇದರ ಬಗ್ಗೆ ಖಚಿತಪಡಿಸಬಹುದು. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.
ಶಾಂತಿ ಕಾಪಾಡಬೇಕು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷದ ಸಂದೇಶಗಳನ್ನು ಹರಡಬಾರದು ಎಂದು ಡಿಜಿಪಿ ಮನವಿ ಮಾಡಿದ್ದಾರೆ. ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸ್ಫೋಟಕಗಳನ್ನು ಪ್ಯಾಕ್ ಮಾಡಲು ಟಿಫಿನ್ ಬಾಕ್ಸ್ ಬಳಸಲಾಗಿದೆಯೇ ಎಂಬ ಪ್ರಶ್ನೆಗೆ, ಸ್ಫೋಟದ ಸ್ಥಳವನ್ನು ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪರಿಶೀಲಿಸುತ್ತಿರುವುದರಿಂದ ಈ ಹಂತದಲ್ಲಿ ಅದನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸ್ಫೋಟದ ಶಬ್ದ ಕೇಳುತ್ತಿದ್ದಂತೆ ಸಭಾಂಗಣದಲ್ಲಿದ್ದ ಮಕ್ಕಳು, ಮಹಿಳೆಯರು ಭಯಭೀತರಾಗಿ ಕಿರುಚಿದರು. ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಹಲವು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ನೆರವಾದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿ, ಸ್ಫೋಟದ ನಂತರದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ. ಗೃಹ ಸಚಿವರ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರಕ್ಕೆ ನೆರವಾಗಲು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಸಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ.
ಈ ಘಟನೆ ದುರದೃಷ್ಟಕರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ವಿಜಯನ್ ಅವರು ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ರಜೆ ಮೇಲೆ ತೆರಳಿರುವ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ, ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
'ಪ್ರಾರ್ಥನೆ ಮುಗಿದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ ಸಂಭವಿಸಿದೆ. ಮೊದಲ ಸ್ಫೋಟವು ಸಭಾಂಗಣದ ಮಧ್ಯದಲ್ಲಿ ಆಗಿದೆ. ಸೆಕೆಂಡುಗಳ ನಂತರ, ಸಭಾಂಗಣದ ಎರಡೂ ಬದಿಗಳಲ್ಲಿ ಏಕಕಾಲದಲ್ಲಿ ಇನ್ನೂ ಎರಡು ಸ್ಫೋಟಗಳು ನಡೆದವು' ಎಂದು ಯಹೋವನ ಸಾಕ್ಷಿಗಳ ಪ್ರಾದೇಶಿಕ ವಕ್ತಾರ ಟಿ.ಎ. ಶ್ರೀಕುಮಾರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಯಹೋವನ ಸಾಕ್ಷಿಗಳು 1870ರ ಸುಮಾರಿಗೆ ಅಮೆರಿಕದಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ ಕ್ರೈಸ್ತ ಪಂಥವಾಗಿದೆ. ಭಾರತದಲ್ಲಿ ಸುಮಾರು 60,000 ಅನುಯಾಯಿಗಳನ್ನು ಹೊಂದಿದೆ ಎನ್ನಲಾಗಿದೆ.