ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ, ಲಾವಾ ಇಂಟರ್‌ನ್ಯಾಶನಲ್ ಮೊಬೈಲ್ ಕಂಪನಿಯ ಎಂಡಿ ಮತ್ತು ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಲಾವಾ ಇಂಟರ್‌ನ್ಯಾಶನಲ್ ಕಂಪನಿಯ ಎಂಡಿ ಹರಿ ಓಂ ರೈ, ಚೀನಾ ಪ್ರಜೆ ಗುವಾಂಗ್‌ವೆನ್ ಕ್ಯಾಂಗ್, ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗಾರ್ಗ್ ಮತ್ತು ರಾಜನ್ ಮಲಿಕ್ ಅವರನ್ನು ಇಡಿ ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ದೇಶಿ ಮೊಬೈಲ್ ತಯಾರಿಕಾ ಕಂಪನಿಯಾದ ಲಾವಾ ಇಂಟರ್‌ನ್ಯಾಶನಲ್, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ.1-2ರಷ್ಟು ಪಾಲು ಹೊಂದಿರುವುದಾಗಿ ಹೇಳಿಕೊಂಡಿದೆ.
ಕಳೆದ ವರ್ಷ ಜುಲೈನಲ್ಲಿ ವಿವೋ ಮತ್ತು ಅದರ ಸಂಬಂಧಿತ ವ್ಯಕ್ತಿಗಳ ಮೇಲೆ ಇಡಿ ದಾಳಿ ನಡೆಸಿತ್ತು ಮತ್ತು ಚೀನಾ ಪ್ರಜೆಗಳು ಹಾಗೂ ಹಲವು ಭಾರತೀಯ ಕಂಪನಿಗಳನ್ನು ಒಳಗೊಂಡ ಪ್ರಮುಖ ಅಕ್ರಮ ಹಣ ವರ್ಗಾವಣೆ ದಂಧೆಯನ್ನು ಭೇದಿಸಿರುವುದಾಗಿ ಹೇಳಿಕೊಂಡಿತ್ತು.