ನವದೆಹಲಿ: ಚೀನಾ ಪರ ಪ್ರಚಾರಕ್ಕಾಗಿ ದೇಣಿಗೆ ಪಡೆದ ಆರೋಪದ ಮೇಲೆ ನ್ಯೂಸ್‌ಕ್ಲಿಕ್ ಪೋರ್ಟಲ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವ ದೆಹಲಿ ಪೊಲೀಸರು, ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಮತ್ತು ದೇಶದ ವಿರುದ್ಧ ಅಸಮಾಧಾನ ಸೃಷ್ಟಿಸಲು ಚೀನಾದಿಂದ ಹೆಚ್ಚಿನ ಪ್ರಮಾಣದ ಹಣ ಹರಿದು ಬಂದಿದೆ ಎಂದು ಆರೋಪಿಸಿದ್ದಾರೆ.
ಕೋರ್ಟ್ ಆದೇಶದ ನಂತರ ದೆಹಲಿ ಪೊಲೀಸರು ಶುಕ್ರವಾರ ಎಫ್‌ಐಆರ್‌ನ ಪ್ರತಿಯನ್ನು ಪೋರ್ಟಲ್‌ಗೆ ಸಲ್ಲಿಸಿದ್ದು, ಅದರಲ್ಲಿ ಕ್ಸಿಯೋಮಿ, ವಿವೋ ಸೇರಿದಂತೆ ಚೀನಾದ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳಿಂದ ನಕಲಿ ಸುದ್ದಿ ಪ್ರಕಟಿಸಲು ನ್ಯೂಸ್‌ಕ್ಲಿಕ್ ಗೆ ಹಣ ಪಾವತಿಯಾಗಿದೆ ಎಂದು ಆರೋಪಿಸಲಾಗಿದೆ.
"ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಭಾರತದ ವಿರುದ್ಧ ಅಸಮಾಧಾನ ಸೃಷ್ಟಿಸುವ ಪಿತೂರಿಯ ಭಾಗವಾಗಿ, ಚೀನಾದಿಂದ ದೊಡ್ಡ ಪ್ರಮಾಣದ ಹಣವನ್ನು ಸ್ವೀಕರಿಸಲಾಗಿದೆ ಮತ್ತು ಅದನ್ನು ಮರೆಮಾಚಲು ದೇಶದ ನೀತಿಗಳು, ಭಾರತದ ಅಭಿವೃದ್ಧಿ ಯೋಜನೆಗಳನ್ನು ಟೀಕಿಸುವಂತಹ ಪಾವತಿಸಿದ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಯಿತು ಎಂದು ಎಫ್ಐಆರ್ ಹೇಳಿದೆ.
ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಕಳೆದ ಮಂಗಳವಾರ ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪತ್ರಕರ್ತರನ್ನು ವಿಚಾರಣೆಗೊಳಪಡಿಸಲಾಗಿದೆ.