ನವದೆಹಲಿ :ಕೇಂದ್ರ ಗೃಹ ಸಚಿವಾಲಯದ ಬಳಿ ಲಭ್ಯವಿರುವ ದತ್ತಾಂಶಗಳ ಅನುಸಾರ ಕಳೆದ ಒಂಭತ್ತು ವರ್ಷಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಲು ಎಫ್ ಸಿ ಆರ್ ಎ ಅಡಿ ಕೇಂದ್ರದಿಂದ ಅನುಮತಿ ಪಡೆದಿರುವ 407 ಎನ್ ಜಿ ಒ ಗಳ ಪೈಕಿ 194 ಕ್ರೈಸ್ತ ಸಮುದಾಯದ ಚಟುವಟಿಕೆಗಳ ಹಿನ್ನಲೆಯವು ಎಂದು thehindu ವರದಿ ಮಾಡಿದೆ.
ಆದಾಗ್ಯೂ ಧರ್ಮವನ್ನು ತಮ್ಮ ಉದ್ದೇಶಗಳಲ್ಲಿ ಪಟ್ಟಿ ಮಾಡಿರದ ಹಲವಾರು ಎನ್ ಜಿ ಒ ಗಳೂ ಇವೆಯಾದರೂ ಅವು ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ ಎನ್ನಲಾಗಿದೆ. ಉದಾಹರಣೆಗೆ ಇಸ್ಕಾನ್ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸಂಸ್ಥೆಯಾಗಿ ಮತ್ತು ದಿಲ್ಲಿಯಲ್ಲಿ ಧಾರ್ಮಿಕ ಸಂಸ್ಥೆಯಾಗಿ ನೋಂದಣಿಯನ್ನು ಹೊಂದಿದೆ. ಅದರ ಅಂಗಸಂಸ್ಥೆ ಅಕ್ಷಯ ಪಾತ್ರಾ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿದ್ದರೆ, ಆರೆಸ್ಸೆಸ್ ಸಂಯೋಜಿತ ಸೇವಾಭಾರತಿ ವಿವಿಧ ರಾಜ್ಯಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದೆ. ಬಿಹಾರದ ಮದರಸಾ ಇಜಾಝುಲ್ ಒಲಮ್ ದುಹೊ ಸುಹೊ ಎಜ್ಯುಕೇಶನ್ ಆಯಂಡ್ ಚ್ಯಾರಿಟೇಬಲ್ ಟ್ರಸ್ಟ್ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿದೆ.
2023ರಲ್ಲಿ ಕಾಯ್ದೆಯ ಉಲ್ಲಂಘನೆಗಾಗಿ ಎಫ್ ಸಿ ಆರ್ ಎ ನೋಂದಣಿ ರದ್ದುಗೊಂಡ ಎಲ್ಲ ನಾಲ್ಕೂ ಎನ್ ಜಿ ಒಗಳು ಕ್ರಿಶ್ಚಿಯನ್ ಸಂಸ್ಥೆಗಳಾಗಿವೆ.
ಗೃಹಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2014ರಿಂದ ಈ ವರ್ಷದ ಅಕ್ಟೋಬರ್ 1ರವರೆಗೆ 3,217 ಸಂಸ್ಥೆಗಳು ಎಫ್ ಸಿ ಆರ್ ಎ ಅಡಿ ಹೊಸದಾಗಿ ನೋಂದಣಿಯನ್ನು ಪಡೆದುಕೊಂಡಿವೆ. ಈ ಪೈಕಿ 194 ಕ್ರೈಸ್ತ ಧಾರ್ಮಿಕ ವರ್ಗದಡಿ, 139 ಹಿಂದು ಧಾರ್ಮಿಕ , 25 ಮುಸ್ಲಿಮ್ ಧಾರ್ಮಿಕ, 29 ಬೌದ್ಧ, 10 ಸಿಖ್ ಮತ್ತು 29 ಇತರ ಧರ್ಮಗಳ ವರ್ಗಗಳಡಿ ನೋಂದಣಿಯನ್ನು ಹೊಂದಿವೆ.
2023ರಲ್ಲಿ ಧಾರ್ಮಿಕ ವರ್ಗದಡಿ ಹೊಸ ಎಫ್ ಸಿ ಆರ್ ಎ ನೋಂದಣಿಯನ್ನು ಪಡೆದಿರುವ 69 ಸಂಸ್ಥೆಗಳ ಪೈಕಿ 26 ಕ್ರಿಶ್ಚಿಯನ್ ಮತ್ತು 27 ಹಿಂದು ಧಾರ್ಮಿಕ ಅಜೆಂಡಾದಡಿ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಕೇವಲ ತಲಾ ಮೂರು ಕ್ರಿಶ್ಚಿಯನ್ ಮತ್ತು ಹಿಂದು ಕಾರ್ಯಕ್ರಮಗಳಡಿ ನೋಂದಣಿಯನ್ನು ಹೊಂದಿವೆ ಎನ್ನುವುದನ್ನು ಗೃಹಸಚಿವಾಲಯದ ದತ್ತಾಂಶಗಳು ತೋರಿಸಿವೆ.