ನ್ಯೂಯಾರ್ಕ್: ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ ಮಹಾಸಭೆಯ ನಿರ್ಣಯದಿಂದ ಭಾರತ ಹೊರಗುಳಿದಿದೆ. ಭಯೋತ್ಪಾದಕ ಕೃತ್ಯಗಳನ್ನು ಜಗತ್ತು ಸಮರ್ಥಿಸಿಕೊಳ್ಳಬಾರದು ಎಂದು ಅದು ತಿಳಿಸಿದೆ.
'ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಯನ್ನು ಎತ್ತಿಹಿಡಿಯುವುದು' ಎಂಬ ಘೋಷ ವಾಕ್ಯದೊಂದಿಗೆ ಜೋರ್ಡಾನ್ ಮಂಡಿಸಿದ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯು ಶುಕ್ರವಾರ ಪ್ರಕಟಿಸಿತ್ತು. ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ನಿರ್ಧಾರಕ್ಕೆ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಯಾಚಿಸಿತ್ತು.
ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ 121 ಸದಸ್ಯ ರಾಷ್ಟ್ರಗಳು ಸಮ್ಮತಿಸಿದರೆ, 14 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದ್ದವು. 44 ದೇಶಗಳು ಈ ನಿರ್ಣಯದಿಂದ ಹೊರಗುಳಿದಿದ್ದು, ಅದರಲ್ಲಿ ಭಾರತವು ಒಂದಾಗಿದೆ.
ಭಾರತದ ನಿರ್ಧಾರದ ಕುರಿತಂತೆ ಮಾತನಾಡಿರುವ ವಿಶ್ವಸಂಸ್ಥೆ ರಾಯಭಾರ ಕಚೇರಿಗೆ ಭಾರತದ ಸಹಾಯಕ ಕಾಯಂ ಪ್ರತಿನಿಧಿ ಯೋಜ್ನಾ ಪಟೇಲ್, 'ಮಾನವೀಯತೆಗೆ ಭಯೋತ್ಪಾದನೆ ಒಂದು ಪಿಡುಗಾಗಿದ್ದು, ಅದಕ್ಕೆ ಯಾವುದೇ ಗಡಿ, ರಾಷ್ಟ್ರೀಯತೆ, ಜನಾಂಗದ ಮಿತಿಯಿಲ್ಲ. ಭಯೋತ್ಪಾದಕ ಕೃತ್ಯಗಳನ್ನು ಜಗತ್ತು ಸಮರ್ಥಿಸಿಕೊಳ್ಳಬಾರದು. ಈ ವಿಷಯದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲ ಒಂದಾಗಬೇಕಿದೆ. ಭಯೋತ್ಪಾದನೆ ವಿಚಾರವಾಗಿ ಶೂನ್ಯ ಸಹಿಷ್ಣುತೆಯನ್ನು ಹೊಂದಬೇಕಿದೆ' ಎಂದರು.
ಗಾಜಾ ಪಟ್ಟಿಗೆ ಮಾನವೀಯ ನೆಲೆಯಲ್ಲಿ ಅನಿರ್ಬಂಧಿತವಾಗಿ ನೆರವು ಮುಂದುವರಿಸಬೇಕೆಂಬ ಬಗ್ಗೆ ನಿರ್ಣಯದಲ್ಲಿ ಒತ್ತಿ ಹೇಳಲಾಗಿದೆ.