ಟೆಲ್ ಅವೀವ್: ಇಸ್ರೇಲ್-ಹಮಾಸ್ ಯುದ್ಧ ಶುರುವಾದ ನಂತರ ಅಮೆರಿಕ ಇಸ್ರೇಲ್ ಗೆ ಬೆಂಬಲ ಘೋಷಿಸಿತ್ತು. ಅದಾದ ಬಳಿಕ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇಸ್ರೇಲ್‌ಗೆ ಆಗಮಿಸಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಿದ್ದರು. ಇದೀಗ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಇಸ್ರೇಲ್ ಗೆ ಭೇಟಿ ನೀಡಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಆಸ್ಟಿನ್ ಭೇಟಿ ಮಾಡಿದರು. ನಂತರ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲಿ ಯುದ್ಧ ಕ್ಯಾಬಿನೆಟ್ ಅನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ವೇಳೆ ಅಮೆರಿಕ ಒದಗಿಸಿದ ಕೆಲವು ಶಸ್ತ್ರಾಸ್ತ್ರಗಳು ಮತ್ತು ಭದ್ರತಾ ಸಹಾಯವನ್ನು ಪರಿಶೀಲಿಸಲಿದ್ದಾರೆ.
ಆಸ್ಟಿನ್ ಇಸ್ರೇಲ್-ಹಮಾಸ್ ಯುದ್ಧದ ವೇಳೆ ಇಲ್ಲಿಗೆ ಭೇಟಿ ನೀಡಿದ ಎರಡನೇ ಉನ್ನತ ಮಟ್ಟದ ಅಮೆರಿಕದ ಅಧಿಕಾರಿಯಾಗಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇಸ್ರೇಲ್‌ಗೆ ಆಗಮಿಸಿದ ಒಂದು ದಿನದ ನಂತರ ಬ್ರಸೆಲ್ಸ್‌ನಿಂದ ಆಸ್ಟಿನ್ ಭೇಟಿ ನೀಡಿದ್ದಾರೆ.
ಇಸ್ರೇಲ್ ಭೂಸೇನೆ ದಾಳಿಗೆ ಮುಂಚಿತವಾಗಿ 'ತಮ್ಮ ಸುರಕ್ಷತೆಗಾಗಿ' ಗಾಜಾ ನಗರದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರವಾಗುವಂತೆ ಸೂಚಿಸಿದೆ.
ಆಸ್ಟಿನ್ ಜೊತೆ ಪ್ರಯಾಣಿಸುತ್ತಿದ್ದ ರಕ್ಷಣಾ ಅಧಿಕಾರಿಗಳು ಇಸ್ರೇಲ್ ಜನರಿಗೆ ಅಮೆರಿಕದ ಅಚಲ ಬೆಂಬಲವನ್ನು ತೋರಿಸಲು ಬಯಸಿದೆ ಎಂದು ಹೇಳಿದರು. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬೇಕಾದುದನ್ನು ಮಾಡಬಹುದು ಎಂದು ಅವರು ಹೇಳಿದರು.
ಇಸ್ರೇಲ್‌ಗೆ ಅಮೆರಿಕದಿಂದ ಶಸ್ತ್ರಾಸ್ತ್ರ ಸಹಾಯ
ಐರನ್ ಡೋಮ್ ಸಿಸ್ಟಮ್‌ಗಾಗಿ ಇಸ್ರೇಲ್‌ಗೆ ಅಮೆರಿಕ ಈಗಾಗಲೇ ಸಣ್ಣ ಬಾಂಬ್‌ಗಳು ಮತ್ತು ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ನೀಡಿದ್ದು ಹೆಚ್ಚಿನದನ್ನು ನೀಡಲಾಗುವುದು ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಡಗುಗಳು, ಗುಪ್ತಚರ ಬೆಂಬಲ ಮತ್ತು ಇತರ ಸ್ವತ್ತುಗಳನ್ನು ಇಸ್ರೇಲ್‌ನ ಪ್ರತ್ಯೇಕ ಪ್ರದೇಶಗಳಿಗೆ ವೇಗವಾಗಿ ಚಲಿಸುವಂತೆ ಆಸ್ಟಿನ್ US ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ನ ಕ್ರೂರ ದಾಳಿಯ ಕೆಲವೇ ಗಂಟೆಗಳಲ್ಲಿ, ಯುಎಸ್ ಯುದ್ಧನೌಕೆಗಳು ಮತ್ತು ವಿಮಾನಗಳನ್ನು ರವಾನಿಸಿದೆ. ಯುದ್ಧದಲ್ಲಿ ಯುಎಸ್ ಕಣ್ಗಾವಲು ವಿಮಾನಗಳನ್ನು ನಡೆಸುತ್ತದೆಯೇ ಎಂದು ಹೇಳಲು ಆಸ್ಟಿನ್ ನಿರಾಕರಿಸಿದರು. ಆದರೆ ಒತ್ತೆಯಾಳು ಪರಿಸ್ಥಿತಿಯ ಕುರಿತು ಸಲಹೆ ಸೇರಿದಂತೆ ಇಸ್ರೇಲಿಗಳಿಗೆ ಗುಪ್ತಚರ ಮತ್ತು ಇತರ ಯೋಜನಾ ಸಹಾಯವನ್ನು ಯುಎಸ್ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.