ಚಂಡೀಗಢ: ನಾಯಿ ಮತ್ತು ದನಗಳಂತಹ ಬಿಡಾಡಿ ಪ್ರಾಣಿಗಳು ದಾಳಿ ನಡೆಸಿದರೆ, ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡಬೇಕಾದ ಪ್ರಾಥಮಿಕ ಹೊಣೆಗಾರಿಕೆ ಸರ್ಕಾರದ್ದಾಗಿದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬಿಡಾಡಿ ಪ್ರಾಣಿಗಳ ದಾಳಿ ಸಂಬಂಧಿಸಿದಂತೆ ದಾಖಲಾಗಿರುವ 193 ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಆಲಿಸುತ್ತಿತ್ತು.
ಬೀದಿ ನಾಯಿಗಳ ಉಪಟಳದ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಈ ಆದೇಶ ಹೊರ ಬಿದ್ದಿದೆ. ಅಕ್ಟೋಬರ್ ತಿಂಗಳಲ್ಲಿ ವಾಘ್ ಬಕ್ರಿ ಟೀ ಸಮೂಹದ ಕಾರ್ಯಕಾರಿ ನಿರ್ದೇಶಕರಾದ 49 ವರ್ಷ ವಯಸ್ಸಿನ ಪರಾಗ್ ದೇಸಾಯಿ ಬೀದಿ ನಾಯಿಗಳ ದಾಳಿಯಲ್ಲಿ ಮೃತಪಟ್ಟ ನಂತರ ಈ ಚರ್ಚೆ ಮತ್ತೊಮ್ಮೆ ಬಿರುಸು ಪಡೆದಿತ್ತು. ಅವರನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಾಗ ಕೆಳಗೆ ಬಿದ್ದ ದೇಸಾಯಿ, ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಇದರ ಬೆನ್ನಿಗೇ, ಬಿಡಾಡಿ ಪ್ರಾಣಿಗಳ ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವು ಮಂದಿ ಮೃತಪಟ್ಟಿರುವ ಮತ್ತು ಗಾಯಗೊಂಡಿರುವ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರು, ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ನಾಯಿ ಕಡಿತಕ್ಕೆ ಪರಿಹಾರ ಒದಗಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, "ತಪ್ಪಿತಸ್ಥರು ಯಾರೇ ಆಗಿದ್ದರು, ಅವರಿಂದ ಪರಿಹಾರ ವಸೂಲಿ ಮಾಡಿ ಸರ್ಕಾರವು ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು" ಎಂದು ತೀರ್ಪು ನೀಡಿತು.
ಬಿಡಾಡಿ ಪ್ರಾಣಿಗಳ ದಾಳಿ ಅಥವಾ ಅವುಗಳಿಂದ ನಡೆಯುವ ಅಪಘಾತ ಪ್ರಕರಣಗಳಿಗೆ ಪಾವತಿಸಬೇಕಾದ ಪರಿಹಾರ ಮೊತ್ತದ ಕುರಿತು ನಿರ್ಧಾರ ಕೈಗೊಳ್ಳಲು ಸಮಿತಿಯೊಂದನ್ನು ರಚಿಸುವಂತೆಯೂ ಪಂಜಾಬ್, ಹರ್ಯಾಣ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು. ಬಿಡಾಡಿ ಪ್ರಾಣಿಗಳ ಪೈಕಿ ಹಸು, ಎತ್ತು, ಹೋರಿ, ಕೋತಿ, ನಾಯಿ, ಎಮ್ಮೆ, ಕ್ರೂರ ಮೃಗಗಳು, ಸಾಕು ಪ್ರಾಣಿಗಳು ಹಾಗೂ ಮರಳುಗಾಡಿನ ಪ್ರಾಣಿಗಳು ಸೇರಿವೆ.