ಕೊಲಂಬೊ: ಭಾರತವು ಶ್ರೀಲಂಕಾಗೆ ನೆರವಿನ ಹಸ್ತವಾಗಿ ತನ್ನ ವಸತಿ ಯೋಜನೆಯ ವಿಸ್ತರಣೆಯಲ್ಲಿ ಚಹಾ ತೋಟಗಳ ಪ್ರದೇಶದಲ್ಲಿ 10,000 ಹೆಚ್ಚುವರಿ ಮನೆಗಳನ್ನು ನಿರ್ಮಿಸಲಿದೆ.
ಭಾರತೀಯ ವಸತಿ ಯೋಜನೆಯ ಹಂತ-4ರ ಅಡಿಯಲ್ಲಿ ಶ್ರೀಲಂಕಾದ ಚಹಾ ತೋಟ ಪ್ರದೇಶಗಳಲ್ಲಿ 10,000 ಮನೆಗಳ ನಿರ್ಮಾಣಕ್ಕಾಗಿ ಭಾರತದ ಹೈಕಮಿಷನ್ ಮಂಗಳವಾರ ಎರಡು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಹೇಳಿಕೆಯೊಂದು ತಿಳಿಸಿದೆ.
ರಾಷ್ಟ್ರೀಯ ವಸತಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಡಿಎ) ಮತ್ತು ರಾಜ್ಯ ಇಂಜಿನಿಯರಿಂಗ್ ಕಾರ್ಪೊರೇಷನ್ (ಎಸ್‌ಇಸಿ) ಎಂಬ ಎರಡು ಏಜೆನ್ಸಿಗಳೊಂದಿಗೆ ಆಗಿರುವ ಪ್ರತ್ಯೇಕ ಒಪ್ಪಂದಗಳು 10,000 ಮನೆಗಳ ನಿರ್ಮಾಣವನ್ನು ಶೀಘ್ರವಾಗಿ ಪ್ರಾರಂಭಿಸುವ ಗುರಿಯನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.
ಕೌನ್ಸಿಲರ್ ಮತ್ತು ಡೆವಲಪ್‌ಮೆಂಟ್ ಕೋಆಪರೇಶನ್ ವಿಂಗ್‌ನ ಮುಖ್ಯಸ್ಥ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್, ಎಸ್‌ಇಸಿ ಅಧ್ಯಕ್ಷ ರತ್ನಸಿರಿ ಕಲುಪಹನ ಮತ್ತು ಎನ್‌ಎಚ್‌ಡಿಎ ಜನರಲ್ ಮ್ಯಾನೇಜರ್ ಕಂಕಣಮಲಗೆ ಅಜಂತ ಜನಕ ಅವರು ಎರಡು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತೀಯ ವಸತಿ ಯೋಜನೆಯ 4ನೇ ಹಂತವು ಶ್ರೀಲಂಕಾದ 11 ಜಿಲ್ಲೆಗಳು ಮತ್ತು 6 ಪ್ರಾಂತ್ಯಗಳಲ್ಲಿ ಹರಡಿದೆ.
'ಭಾರತೀಯ ವಸತಿ ಯೋಜನೆಯಡಿಯಲ್ಲಿ ಭಾರತ ಸರ್ಕಾರವು ಒಟ್ಟಾರೆ 60,000 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಮೊದಲ ಎರಡು ಹಂತಗಳಲ್ಲಿ 46,000 ಮನೆಗಳು ಪೂರ್ಣಗೊಂಡಿದ್ದು, ತೋಟ ಪ್ರದೇಶಗಳಲ್ಲಿ 4,000 ಮನೆಗಳ ನಿರ್ಮಾಣದ ಮೂರನೇ ಹಂತವು ಮುಕ್ತಾಯದ ಹಂತದಲ್ಲಿದೆ'ಎಂದು ಪ್ರಕಟಣೆ ತಿಳಿಸಿದೆ.
ಈ ಮಧ್ಯೆ, ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಬುಧವಾರ ಕೊಲಂಬೊದಿಂದ ಮೆಡವಾಚಿಯಾಗೆ ಭಾರತ ಒದಗಿಸಿರುವ ವಿಶಾಲವಾದ ರೈಲಿನ ಕೋಚ್‌ನಲ್ಲಿ ಪ್ರಯಾಣಿಸಿದರು.