ವಾಷಿಂಗ್ಟನ್: ಅಮೆರಿಕದ ವಿವಿಧ ಭಾಗಗಳಲ್ಲಿ ನಡೆದ ಸ್ಥಳೀಯ ಮತ್ತು ರಾಜ್ಯ ಮಟ್ಟದ ಚುನಾವಣೆಗಳಲ್ಲಿ ಕನಿಷ್ಠ 10 ಮಂದಿ ಭಾರತೀಯ-ಅಮೆರಿಕನ್ನರು, ಬಹುತೇಕ ಡೆಮಾಕ್ರಾಟ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ವರ್ಜೀನಿಯಾದಲ್ಲಿ ಹೈದರಾಬಾದ್ ಮೂಲದ ಗಜಾಲಾ ಹಶ್ಮಿ ಸತತ ಮೂರನೇ ಅವಧಿಗೆ ರಾಜ್ಯ ಸೆನೆಟ್‌ಗೆ ಮರು ಆಯ್ಕೆಯಾದರು.
ಸುಹಾಸ್ ಸುಬ್ರಮಣ್ಯಂ ಎಂಬುವರು ವರ್ಜೀನಿಯಾ ರಾಜ್ಯ ಸೆನೆಟ್‌ಗೆ ಮರು ಆಯ್ಕೆಯಾದರು. ಅವರು 2019 ಮತ್ತು 2021ರಲ್ಲಿ ಎರಡು ಅವಧಿಗೆ ಹೌಸ್ ಆಫ್ ಡೆಲಿಗೇಟ್ಸ್‌ಗೆ ಚುನಾಯಿತರಾಗಿದ್ದರು. ಒಬಾಮಾ ಆಡಳಿತದ ಸಮಯದಲ್ಲಿ ಶ್ವೇತಭವನದ ತಂತ್ರಜ್ಞಾನ ನೀತಿ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಹೂಸ್ಟನ್‌ನಲ್ಲಿ ಜನಿಸಿದ ಸುಬ್ರಮಣಿಯನ್ ವರ್ಜೀನಿಯಾ ಶಾಸನ ಸಭೆಗೆ ಚುನಾಯಿತರಾದ ಮೊದಲ ಹಿಂದೂ.
90ರ ದಶಕದಲ್ಲಿ ಭಾರತದಿಂದ ವಲಸೆ ಬಂದ ಉದ್ಯಮಿ ಕಣ್ಣನ್ ಶ್ರೀನಿವಾಸನ್, ಭಾರತ-ಅಮೆರಿಕನ್ ಪ್ರಾಬಲ್ಯವಿರುವ ಲೌಡನ್ ಕೌಂಟಿ ಪ್ರದೇಶದಿಂದ ವರ್ಜೀನಿಯಾ ಹೌಸ್ ಆಫ್ ಡೆಲಿಗೇಟ್ಸ್‌ಗೆ ಆಯ್ಕೆಯಾದರು. ವರ್ಜೀನಿಯಾದ ಎಲ್ಲಾ ಮೂವರು ವಿಜೇತರು ಡೆಮಾಕ್ರಟಿಕ್ ಪಕ್ಷದವರು.
ನ್ಯೂಜೆರ್ಸಿಯಲ್ಲಿ, ಡೆಮಾಕ್ರಟಿಕ್ ಪಕ್ಷದಿಂದ ಭಾರತೀಯ ಅಮೆರಿಕನ್ನರಾದ ವಿನ್ ಗೋಪಾಲ್ ಮತ್ತು ರಾಜ್ ಮುಖರ್ಜಿ ಅವರು ರಾಜ್ಯ ಸೆನೆಟ್‌ಗೆ ಆಯ್ಕೆಯಾದರು. ನ್ಯೂಜೆರ್ಸಿಯ ಬರ್ಲಿಂಗ್‌ಟನ್ ಕೌಂಟಿಯ ಬೋರ್ಡ್ ಆಫ್ ಕೌಂಟಿ ಕಮಿಷನರ್ ಮಂಡಳಿಗೆ ಶಿಕ್ಷಕ ಭಾರತೀಯ-ಅಮೆರಿಕನ್ ಬಲ್ವೀರ್ ಸಿಂಗ್ ಮರು ಆಯ್ಕೆಯಾದರು.
ಪೆನ್ಸಿಲ್ವೇನಿಯಾದಲ್ಲಿ, ಡೆಮಾಕ್ರಟಿಕ್ ಪಕ್ಷದ ನೀಲ್ ಮಖಿಜಾ ಅವರು ಮಾಂಟ್‌ಗೊಮೆರಿ ಕೌಂಟಿ ಕಮಿಷನರ್ ಮಂಡಳಿಗೆ ಆಯ್ಕೆಯಾದರು. ಇಂಡಿಯನ್-ಅಮೆರಿಕನ್ ವೈದ್ಯೆ ಡಾ. ಅನಿತಾ ಜೋಶಿ ಇಂಡಿಯಾನಾದ ಕಾರ್ಮೆಲ್ ಸಿಟಿ ಕೌನ್ಸಿ ಲರ್ ಆಗಿ ಆಯ್ಕೆಯಾದರು.
ಕಾಮನ್‌ವೆಲ್ತ್‌ನ 342 ವರ್ಷಗಳ ಇತಿಹಾಸದಲ್ಲಿ ಕೌಂಟಿಯ ಕಮಿಷನರ್‌ಗಳ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಮೊದಲ ಭಾರತೀಯ ಅಮೆರಿಕನ್ ಮಖಿಜಾ. ರಿಪಬ್ಲಿಕನ್ ಭದ್ರಕೋಟೆಯಲ್ಲಿ ಗೆದ್ದ ಏಕೈಕ ಡೆಮಾಕ್ರಾಟ್ ಡಾ. ಜೋಶಿ.
ಅಮೆರಿಕದಲ್ಲಿ ಹುಟ್ಟಿ ಬೆಳೆದ ಪ್ರಿಯಾ ತಮಿಳರಸನ್ ಓಹಿಯೊದ ಗಹನ್ನಾ ಸಿಟಿ ಅಟಾರ್ನಿ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಜಿಂಬಾಬ್ವೆಯಿಂದ ವಲಸೆ ಬಂದ ಭಾರತೀಯ ಮೂಲದ ಲ್ಯಾಂಡ್ ಬ್ಯಾಂಕ್ ಸಿಇಒ ಅರುಣನ್ ಅರುಲಂಪಾಲಂ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ನ ಮೇಯರ್ ಆಗಿ ಆಯ್ಕೆಯಾದರು.
ತಮ್ಮ ಗೆಲುವಿನ ನಂತರ, ಎಲ್ಲಾ 10 ಭಾರತೀಯ-ಅಮೆರಿಕನ್ ಅಭ್ಯರ್ಥಿಗಳು ತಮಗೆ ಮತ ಹಾಕಿದ ಜನರಿಗಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.