ಮುಂಬೈ: ಮುಂಬೈನ 24 ಅಂತಸ್ತಿನ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 135 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಘೋಡಾಪ್ಡಿಯೊ ಪ್ರದೇಶದ ಎಂಎಚ್‌ಎಡಿಎ ಕಾಲೊನಿಯ ನ್ಯೂ ಹಿಂದ್ ಮಿಲ್ ಕಾಂಪೌಂಡ್‌ನಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ ಮುಂಜಾನೆ 3.40ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಕಟ್ಟಡದ 1ರಿಂದ 24ನೇ ಮಹಡಿಯವರೆಗಿನ ಎಲೆಕ್ಟ್ರಿಕ್ ಮೀಟರ್ ಕ್ಯಾಬಿನ್, ಕೇಬಲ್ ಮೂಲಕ ಅಗ್ನಿ ವ್ಯಾಪಿಸಿದೆ. ಕಟ್ಟಡದ ವಿವಿಧ ಮಹಡಿಗಳಿಂದ ಕನಿಷ್ಠ 135 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
25 ಮಂದಿಯನ್ನು ಟೆರೇಸ್‌ನಿಂದ, 30 ಮಂದಿಯನ್ನು 15ನೇ ಮಹಡಿಯಲ್ಲಿನ ಆಶ್ರಯ ಪ್ರದೇಶದಿಂದ ಮತ್ತು 80 ಜನರನ್ನು ಕಟ್ಟಡದ 22ನೇ ಮಹಡಿಯಿಂದದಿಂದ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದ ತಕ್ಷಣ ಐದು ಅಗ್ನಿಶಾಮಕ ದಳಗಳು ಮತ್ತು ಮೂರು ನೀರಿನ ಟ್ಯಾಂಕರ್‌ಗಳು ಹಾಗೂ ಇತರ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಳಿಗ್ಗೆ 7.20ರ ಹೊತ್ತಿಗೆ ಬೆಂಕಿಯನ್ನು ನಂದಿಸಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ, ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿರಬಹುದು ಎಂದು ಶಂಕಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.