ನವದೆಹಲಿ: ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಜೆಎಫ್) ಸಂಘಟನೆ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಮತ್ತು ಹರಿಯಾಣದ 14 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಈಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ಹಾಗೂ ನವೆಂಬರ್ 19ರಿಂದ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳಿಸುವ ಬೆದರಿಕೆ ಹಾಕಿದ್ದಕ್ಕಾಗಿ ಕೆನಡಾದಲ್ಲಿ ನೆಲೆಸಿರುವ ಘೋಷಿತ ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿತ್ತು.
ಉಗ್ರ ಪನ್ನೂ ಹಾಗೂ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಜೆಎಫ್) ಸಂಘಟನೆ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಎನ್‌ಐಎ ಪ್ರಕರಣ ದಾಖಲಿಸಿತ್ತು.
ನವೆಂಬರ್ 4ರಂದು ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದ ಪನ್ನೂ, ನವೆಂಬರ್ 19ರ ನಂತರ ಏರ್ ಇಂಡಿಯಾ ವಿಮಾನಗಳಲ್ಲಿ ಸಂಚರಿಸುವುದನ್ನು ನಿಲ್ಲಿಸುವಂತೆ ಸಿಖ್ಖರಿಗೆ ಸೂಚನೆ ನೀಡಿದ್ದ. ಸಾಮಾಜಿಕ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ಈ ವಿಡಿಯೊ ಹಂಚಿಕೊಂಡಿದ್ದ.
ಇದರ ಬೆನ್ನಲ್ಲೇ, ಕೆನಡಾ, ಭಾರತ ಸೇರಿದಂತೆ ಏರ್ ಇಂಡಿಯಾ ವಿಮಾನಗಳು ಸಂಚರಿಸುವ ಇತರ ದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತಲ್ಲದೇ, ತನಿಖೆಯನ್ನೂ ಆರಂಭಿಸಲಾಗಿತ್ತು.
ಹೆಚ್ಚಿನ ನಿಗಾ: ಪನ್ನೂ ಚಲನವಲನ ಹಾಗೂ ಚಟುವಟಿಕೆಗಳ ಮೇಲೆ 2019ರಿಂದಲೂ ನಿಗಾ ಇರಿಸಿದ್ದ ಎನ್‌ಐಎ, ಆತನ ವಿರುದ್ಧ ಮೊದಲ ಬಾರಿ ಪ್ರಕರಣ ದಾಖಲಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ, ಪಂಜಾಬ್‌ನ ಅಮೃತಸರ ಹಾಗೂ ಚಂಡೀಗಢದಲ್ಲಿರುವ ಪನ್ನೂಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
2021ರ ಫೆಬ್ರುವರಿ 3ರಂದು ಎನ್‌ಐಎ ವಿಶೇಷ ನ್ಯಾಯಾಲಯವು ಪನ್ನೂ ಬಂಧನಕ್ಕಾಗಿ ಜಾಮೀನುರಹಿತ ವಾರಂಟ್‌ಗಳನ್ನು ಹೊರಡಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಆತನನ್ನು 'ಘೋಷಿತ ಅಪರಾಧಿ' ಎಂದು ಸಾರಲಾಗಿತ್ತು.