ಚೆನ್ನೈ: ಶ್ರೀಲಂಕಾದ ಜೈಲಿನಿಂದ ಬಿಡುಗಡೆಗೊಂಡ ತಮಿಳುನಾಡಿನ 15 ಮೀನುಗಾರರು ಮಂಗಳವಾರ ಚೆನ್ನೈಗೆ ಆಗಮಿಸಿದರು.
ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೀನುಗಾರರನ್ನು, ತಮಿಳುನಾಡು ಬಿಜೆಪಿಯ ರಾಜ್ಯ ನಾಯಕರು ಸ್ವಾಗತಿಸಿದರು. ಬಳಿಕ ಅವರು ರಸ್ತೆ ಮಾರ್ಗದ ಮೂಲಕ ರಾಮೇಶ್ವರಂಗೆ ತೆರಳಿದರು.
ನವೆಂಬರ್ 14ರಂದು ಇವರು ಎರಡು ಯಾಂತ್ರಿಕೃತ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಜಲ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಅವರನ್ನು ಶ್ರೀಲಂಕಾ ಬಂಧಿಸಿತ್ತು.
ಅಕ್ಟೋಬರ್ 28ರಂದು ಕೂಡ ಮೀನುಗಾರಿಕೆಗೆ ತೆರಳಿದ್ದ 23 ಮಂದಿಯನ್ನು ಶ್ರಿಲಂಕಾದ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬಿಡುಗಡೆ ಮಾಡಲಾಗಿತ್ತು.