ನವದೆಹಲಿ: ಅಮೆರಿಕದ ಪೆನ್ಸಿಲ್ವೇನಿಯಾದ ನರ್ಸ್ ಆಗಿರುವ ಹೀದರ್ ಪ್ರೆಸ್‌ಡೀ(41) ಈ ಹಿಂದೆ ಮಿತಿಮೀರಿದ ಇನ್ಸುಲಿನ್ ಡೋಸ್ ಮೂಲಕ ಇಬ್ಬರು ರೋಗಿಗಳ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿದ್ದಾರೆ. ಆದರೆ ಆಕೆ ಈ ಹಿಂದೆ ಕೆಲಸ ಮಾಡುತ್ತಿದ್ದ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ 17 ಜನರ ಜೀವಹಾನಿ ಮಾಡಲು ಪ್ರಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಹೀದರ್ ಪ್ರೆಸ್ಡೀ ವಿರುದ್ಧ ಎರಡು ಪ್ರಥಮ ಹಂತದ ಕೊಲೆ, 17 ಕೊಲೆ ಯತ್ನ ಮತ್ತು 19 ನಿಗಾದಲ್ಲಿದ್ದ ವ್ಯಕ್ತಿಗಳ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ.
ಪ್ರೆಸ್‌ಡೀ ರೋಗಿಗಳ ಮಧುಮೇಹ ಸ್ಥಿತಿ ಲೆಕ್ಕಿಸದೆ ಅತಿಯಾದ ಇನ್ಸುಲಿನ್ ಅನ್ನು ನೀಡುತ್ತಿದ್ದರು. ಇದರ ಪರಿಣಾಮ 17 ರೋಗಿಗಳ ದುರಂತ ಸಾವು ಸಂಭವಿಸಿದೆ.
ಪ್ರೆಸ್ಡೀ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಆಕೆ ತನ್ನ ರೋಗಿಗಳಿಗೆ ಕಾಳಜಿ ವಹಿಸುವ ಬದಲು ಉದ್ದೇಶಪೂರ್ವಕ ಮತ್ತು ವ್ಯವಸ್ಥಿತವಾಗಿ ಜೀವಹಾನಿಯನ್ನುಂಟುಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂತಹವರನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ಆಕೆ ವಿರುದ್ಧ ಪೆನ್ಸಿಲ್ವೇನಿಯಾದ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯಲ್ಲಿ ಅಟಾರ್ನಿ ಜನರಲ್ ಹೆನ್ರಿ ತಿಳಿಸಿದರು.
ಮೂವರು ರೋಗಿಗಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕಾಗಿ 2023ರ ಮೇ ತಿಂಗಳಲ್ಲಿ ಹೀದರ್ ಪ್ರೆಸ್ಡೀ ವಿರುದ್ಧ ಆರೋಪ ಹೊರಿಸಲಾಗಿತ್ತು, ಪ್ರಸ್ತುತ ಆಕೆ ಪೆನ್ಸಿಲ್ವೇನಿಯಾದ ಬಟ್ಲರ್ ಕೌಂಟಿ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ.