ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಒಟ್ಟು ಏಳು ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ತೆಲಂಗಾಣದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಗಳೂ ಇದರಲ್ಲಿ ಸೇರಿವೆ.
ಇವಲ್ಲದೆ, ಅಂಗೀಕಾರಕ್ಕೆ ಬಾಕಿ ಇರುವ ಹತ್ತು ಮಸೂದೆಗಳು ಕೂಡ ಚರ್ಚೆಗೆ ಬರಲಿವೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ನಿಬಂಧನೆಗಳು ಮತ್ತು ಅಧಿಕಾರ ಅವಧಿ) ಮಸೂದೆ ಕೂಡ ಚರ್ಚೆಗೆ ಬರಲಿದೆ. ಈ ಮಸೂದೆಯು ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಲ್ಲದ ಸಮಿತಿಯೊಂದರ ಮೂಲಕ ನಡೆಸುವ ಪ್ರಸ್ತಾವ ಹೊಂದಿದೆ.
ಜಿಎಸ್‌ಟಿ ಮಂಡಳಿಯ ಕೆಲವು ಶಿಫಾರಸುಗಳನ್ನು ಜಾರಿಗೆ ತರಲು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಎರಡನೆಯ ತಿದ್ದುಪಡಿ) ಮಸೂದೆ 2023ನ್ನು ಮಂಡಿಸುವ ಬಗ್ಗೆಯೂ ಕೇಂದ್ರ ಆಲೋಚನೆ ನಡೆಸಿದೆ.
ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆದುಕೊಳ್ಳುವುದು ಕೇಂದ್ರದ ಪ್ರಮುಖ ಉದ್ದೇಶ ಆಗಿರಲಿದೆ. ಈ ಮಸೂದೆಗಳನ್ನು ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ಪರಿಶೀಲಿಸಿದೆ.