ಕೊಚ್ಚಿ: ಕಲಮಸ್ಸೆರಿಯಲ್ಲಿ ಸಂಭವಿಸಿದ ಸ್ಫೋಟದ ನಂತರ, ‘ಯೆಹೋವನ ಸಾಕ್ಷಿಗಳ’ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೇರಳದಲ್ಲಿ ನಾಮಮಾತ್ರ ಭಕ್ತರಿದ್ದರೂ ಚರ್ಚ್ ಗೆ ಹಲವು ವರ್ಷಗಳ ಇತಿಹಾಸವಿದೆ.
ಯೆಹೋವನ ಸಾಕ್ಷಿಗಳ ಸ್ಥಾಪಕ ಚಾಲ್ರ್ಸ್ ಟೈಸ್ ರಸೆಲ್ ಕೇರಳದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ. ಕೇರಳದ ತಿರುವನಂತಪುರಂ ಜಿಲ್ಲೆಯ ಬಲರಾಮಪುರಂ ಪಂಚಾಯತಿಯಲ್ಲಿ ರಸೆಲ್ ಹೆಸರಿನ ಸ್ಥಳವಿದೆ, ರಸೆಲ್ಪುರಂ.
ಯೆಹೋವನ ಸಾಕ್ಷಿಗಳ ಸಂಸ್ಥಾಪಕ ಸಿ.ಟಿ. ರಸೆಲ್ ಬೋಧಿಸಿದ ಸ್ಥಳವನ್ನು ನಂತರ ರಸೆಲ್ಪುರಂ ಎಂದು ಕರೆಯಲಾಯಿತು. ರಸ್ಸೆಲ್ 1912 ರಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ. 1911ರಲ್ಲಿ ಅಂದಿನ ತಿರುವಾಂಕೂರಿನ ರಾಜ ರಸೆಲ್ ನನ್ನು ತಿರುವಾಂಕೂರುಗೆ ಆಹ್ವಾನಿಸಿದನೆಂದು ಹೇಳಲಾಗುತ್ತದೆ. 1912 ರಲ್ಲಿ, ರಸೆಲ್ ರಾಜನ ಆಹ್ವಾನವನ್ನು ಒಪ್ಪಿಕೊಂಡು ತಿರುವನಂತಪುರಂ ತಲುಪಿದ. ಸಭಾಂಗಣದಲ್ಲಿ ಹಾಗೂ ಬಾಲರಾಮಪುರದ ಅಂಜಾರಕಾಡ್ ಎಂಬ ಗ್ರಾಮದಲ್ಲಿ ಭಾಷಣ ಮಾಡಿದ್ದ. ಈ ಗ್ರಾಮದ ಹೆಸರನ್ನು ನಂತರ ರಸೆಲ್ಪುರಂ ಎಂದು ಬದಲಾಯಿಸಲಾಯಿತು.
ಅಮೇರಿಕನ್ ಬೈಬಲ್ ಸಂಶೋಧಕ ಚಾಲ್ರ್ಸ್ ಟೈಸ್ ರಸೆಲ್ ಆಗಮನದೊಂದಿಗೆ, ಕೇರಳದಲ್ಲಿ ಯೆಹೋವನ ಸಾಕ್ಷಿಗಳ ನಂಬಿಕೆ ಪ್ರಾರಂಭವಾಯಿತು. ತಿರುವಾಂಕೂರಿನಲ್ಲಿ ರಸೆಲ್ ಮಾಡಿದ ಭಾಷಣಗಳು ರಾಜನ ಗಮನವನ್ನು ಸೆಳೆದವು ಮತ್ತು ಅವನನ್ನು ಅರಮನೆಗೆ ಆಹ್ವಾನಿಸಲಾಯಿತು ಎಂದು ಹೇಳಲಾಗುತ್ತದೆ. ತಿರುವಾಂಕೂರಿನ ರಾಜನು ರಸೆಲ್‍ನ ಕೈಯಿಂದ ಬೈಬಲ್ ಮತ್ತು ರಸೆಲ್ ಬರೆದ ಸ್ಟಡೀಸ್ ಆಫ್ ಸ್ಕ್ರಿಪ್ಚರ್ಸ್ ಎಂಬ ಪುಸ್ತಕವನ್ನು ಪಡೆದನು ಎಂದು ಇತಿಹಾಸ ಹೇಳುತ್ತದೆ. ರಸೆಲ್‍ನ ಚಿತ್ರವನ್ನು ರಾಜನಿಂದ ವಿನಂತಿಸಲಾಯಿತು ಮತ್ತು ನಂತರ ಅರಮನೆಯಲ್ಲಿ ಇರಿಸಲಾಯಿತು. ಚಿತ್ರವನ್ನು ಕೇರಳ ವಿಶ್ವವಿದ್ಯಾಲಯದ ಸೆನೆಟ್ ಹಾಲ್£ಲ್ಲಿ ಈಗಲೂ ನೋಡಬಹುದಾಗಿದೆ.
ಈ ವಿಭಾಗದ ಚರ್ಚಿನ ಆರಂಭಿಕ ಚಟುವಟಿಕೆಯು ಕೊಟ್ಟಾಯಂ ಮತ್ತು ಪತ್ತನಂತಿಟ್ಟದಲ್ಲಿ ಕೇಂದ್ರೀಕೃತವಾಗಿತ್ತು. ಈಗ ಕೇರಳದಾದ್ಯಂತ ಸಕ್ರಿಯವಾಗಿದೆನೀ ತಂಡ ಸಾಮಾನ್ಯವಾಗಿ ರಾಜಕೀಯವಾಗಿ ತಟಸ್ಥರಾಗಿದ್ದಾರೆ. ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸದಿರುವುದು, ರಾಷ್ಟ್ರಗೀತೆಯನ್ನು ಹಾಡದಿರುವುದು ಮತ್ತು ಸೇನಾ ಸೇವೆ ಮಾಡದಿರುವುದಕ್ಕೆ ಧಾರ್ಮಿಕ ಕಾರಣಗಳನ್ನು ಅವರು ಉಲ್ಲೇಖಿಸುತ್ತಾರೆ. ಆದ್ದರಿಂದ, ಮಿಲಿಟರಿ ಸೇವೆ ಕಡ್ಡಾಯವಾಗಿರುವ ಅನೇಕ ಯುರೋಪಿಯನ್ ದೇಶಗಳಲ್ಲಿ, ಅವರು ದೊಡ್ಡ ಕಿರುಕುಳವನ್ನು ಅನುಭವಿಸುತ್ತಾರೆ ಎನ್ನಲಾಗಿದೆ. ಕೇರಳದಲ್ಲಿಯೂ ನಂಬಿಕೆಯನ್ನು ರಕ್ಷಿಸಲು ಅವರು ದೊಡ್ಡ ಕಾನೂನು ಹೋರಾಟಗಳನ್ನು ನಡೆಸಿದ್ದಾರೆ.
ಜುಲೈ 26, 1985 ರಂದು, ರಾಷ್ಟ್ರಗೀತೆಯನ್ನು ಹಾಡದ ಕಾರಣಕ್ಕಾಗಿ ಕೊಟ್ಟಾಯಂನಲ್ಲಿ ಕೆಲವು ಯೆಹೋವನ ಸಾಕ್ಷಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಯಿತು. ನಂತರ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಷ್ಟ್ರಗೀತೆ ಹಾಡದ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಬಾರದು ಎಂದು ತೀರ್ಪು ನೀಡಲಾಗಿತ್ತು. ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಪೀಠವು ಹೈಕೋರ್ಟ್ ಅನ್ನು ಟೀಕಿಸಿತು ಮತ್ತು ಹೊರಹಾಕಲ್ಪಟ್ಟ ಯೆಹೋವನ ಸಾಕ್ಷಿ ವಿದ್ಯಾರ್ಥಿಗಳನ್ನು ಮರುಸೇರ್ಪಡೆಗೊಳಿಸುವಂತೆ ಆದೇಶಿಸಿತು.
ಕೇರಳದಲ್ಲಿ ಈ ಚರ್ಚ್ ಅನ್ನು ನಂಬುವವರು ಕೇವಲ ಹತ್ತು ಸಾವಿರ ಜನರಿದ್ದಾರೆ. ಆದಾಗ್ಯೂ, ಅವರ ಬಲವಾದ ನಂಬಿಕೆ ಅವರ ವಿಶಿಷ್ಟ ಲಕ್ಷಣವಾಗಿದೆ. ಮುಖ್ಯವಾಹಿನಿಯ ಕ್ರಿಶ್ಚಿಯನ್ನರಂತಲ್ಲದೆ, ಯೆಹೋವನ ಸಾಕ್ಷಿಗಳು ಯೆಹೋವನನ್ನು ಒಬ್ಬನೇ ದೇವರೆಂದು ನಂಬುವವರಾಗಿದ್ದಾರೆ. ಮಿಕ್ಕ ಕ್ರಿಸ್ತರಂತೆ ಅವರು ತಂದೆ, ಮಗ ಮತ್ತು ಪವಿತ್ರ ಆತ್ಮದ(ಪಿತಾವ್, ಪುತ್ರನ್, ಪವಿತ್ರಾತ್ಮಾವ್) ತ್ರಿಮೂರ್ತಿಗಳ ಪರಿಕಲ್ಪನೆಯನ್ನು ಹೊಂದಿಲ್ಲ. ಪ್ರಪಂಚದಾದ್ಯಂತ ಹರಡಿರುವ ಯೆಹೋವನ ಸಾಕ್ಷಿಗಳು ಎಂಬ ಧಾರ್ಮಿಕ ಗುಂಪು 87 ಲಕ್ಷ ಭಕ್ತರನ್ನು ಹೊಂದಿದೆ.