ನವದೆಹಲಿ: ಐದು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ನಕಲಿ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರಿಗೆ ದೆಹಲಿ ಹೈಕೋರ್ಟ್ ₹1 ಲಕ್ಷ ದಂಡ ವಿಧಿಸಿದೆ.
ನವದೆಹಲಿ: ಐದು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ನಕಲಿ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರಿಗೆ ದೆಹಲಿ ಹೈಕೋರ್ಟ್ ₹1 ಲಕ್ಷ ದಂಡ ವಿಧಿಸಿದೆ.
ಮಹಿಳೆ ದಾಖಲಿಸಿದ್ದ ಸುಳ್ಳು ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಸುಶೀಲಾ ಬಾಲಾ ದಗಾರ್ ಈ ಆದೇಶ ಹೊರಡಿಸಿದ್ದಾರೆ.
ದಿನನಿತ್ಯದ ಜಗಳದಿಂದ ತನ್ನನ್ನು ರಕ್ಷಿಸಿಕೊಳ್ಳಲು ಕೋಪದ ಭರದಲ್ಲಿ ಸುಳ್ಳು ದೂರು ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಆರೋಪಿಗಳಿಂದ ಆಸ್ತಿ ಸುಲಿಗೆ ಮಾಡಲು ಸುಳ್ಳು ಮಾಹಿತಿ ನೀಡಿದ್ದಾರೆ. ಮಹಿಳೆ ಪೋಕ್ಸೊ ಕಾಯ್ದೆಯನ್ನು ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ಆಸ್ತಿ ಕಲಹ, ವೈವಾಹಿಕ ಜಗಳ, ವೈಯಕ್ತಿಕ ದ್ವೇಷ, ರಾಜಕೀಯ ಪ್ರೇರಿತವಾಗಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಅಥವಾ ಆರೋಪಿಗಳನ್ನು ದೀರ್ಘಾವಧಿಯವರೆಗೆ ಜೈಲಿನಲ್ಲಿ ಇರಿಸುವ ಮೂಲಕ ಅವರನ್ನು ಅವಮಾನಿಸಲು ಈ ಮಹಿಳೆಯಂತೆ ಜನರು ಪೋಕ್ಸೊ ಕಾಯ್ದೆಯಡಿ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ. ಇದು ಕಾನೂನಿನ ದುರುಪಯೋಗ. ಅಂತಹ ಕೃತ್ಯಗಳು ಶಾಸನದ ಉದ್ದೇಶವನ್ನು ಕೀಳಾಗಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.
ಮಹಿಳೆಗೆ ₹1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ, ಒಂದು ವೇಳೆ ಒಂದು ತಿಂಗಳ ಒಳಗೆ ದಂಡ ಪಾವತಿ ಮಾಡದಿದ್ದರೆ ಮೂರು ತಿಂಗಳು ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸೂಚಿಸಿದೆ.