ರಾಜಸ್ಥಾನ:*20 ಬಾರಿ ಸ್ಪರ್ಧೆ: ರಾಜಸ್ಥಾನದಲ್ಲಿ 78 ವರ್ಷ ವಯಸ್ಸಿನ ತೀತರ್ ಸಿಂಗ್ ಅವರು 1970ರಿಂದ ಈವರೆಗೆ 20 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪ್ರತಿಸಲವೂ ಠೇವಣಿ ಕಳೆದುಕೊಂಡಿದ್ದಾರೆ.
ನವೆಂಬರ್ 25ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಕರಣಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
*4ನೇ ಪಟ್ಟಿ ಬಿಡುಗಡೆ: ನವೆಂಬರ್ 30ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ 12 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ ಚಲಮಲ ಕೃಷ್ಣಾರೆಡ್ಡಿ ಅವರಿಗೆ ಮುನುಗೊಡ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ದುರ್ಗಂ ಅಶೋಕ್, ವಿ. ಸುಭಾಷ್ ರೆಡ್ಡಿ, ಬೊಮ್ಮಾ ಶ್ರೀರಾಮ್ ಚಕ್ರವರ್ತಿ ಟಿಕೆಟ್ ಪಡೆದವರಲ್ಲಿ ಪ್ರಮುಖರು. ಒಟ್ಟು 119 ಸ್ಥಾನಗಳ ಪೈಕಿ ಬಿಜೆಪಿ 100 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಉಳಿದ 19 ಸ್ಥಾನಗಳನ್ನು ಪವನ್ ಕಲ್ಯಾಣ್ ನೇತೃತ್ವದ ಜನಸೇನಾಕ್ಕೆ ಬಿಟ್ಟುಕೊಡುವ ಸಾಧ್ಯತೆ ಇದೆ.
* 'ದಲಿತರ ಏಳಿಗೆಗೆ ಬದ್ಧ': 1950ರ ದಶಕದಲ್ಲಿ ಸಂಸದೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಡಾ. ಬಿ.ಆರ್. ಅಂಬೇಡ್ಕರ್ ಅವರ ಸೋಲಿಗೆ ಕಾರಣವಾಗಿತ್ತು. ಆದರೆ ಬಿಆರ್‌ಎಸ್ ದಲಿತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದರು.
ತಮ್ಮ ಸರ್ಕಾರವು ವಿಶ್ವದಲ್ಲೇ ಅತ್ಯಂತ ಎತ್ತರದ (125 ಅಡಿ) ಅಂಬೇಡ್ಕರ್ ಪ್ರತಿಮೆಯನ್ನು ಹೈದರಾಬಾದ್‌ನಲ್ಲಿ ಸ್ಥಾಪಿಸಿದೆ ಎಂದರು.
*'ಭ್ರಷ್ಟ ಸರ್ಕಾರ': ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ತಡೆಯೊಡ್ಡಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ಪೂಜೆ ನೆರವೇರಿಸಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ರಾಜಸ್ಥಾನದ ಕುಚಾಮನ್‌ನಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಹಿಂದಿನ ಸರ್ಕಾರ ಆರಂಭಿಸಿದ್ದ ಕಲ್ಯಾಣ ಕಾರ್ಯಕ್ರಮಗಳನ್ನು ಮಾಯ ಮಾಡಿದೆ. ಮಾಂತ್ರಿಕ ಮಾತ್ರ ಇದನ್ನು ಮಾಡಲು ಸಾಧ್ಯ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರನ್ನು ಟೀಕಿಸಿದರು.