ಬದಿಯಡ್ಕ: 2011ರ ನಂತರ ಜನಿಸಿದವರನ್ನು ಎಂಡೋಸಲ್ಫಾನ್ ಪೀಡಿತರ ಪಟ್ಟಿಗೆ ಸೇರಿಸದಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕೇರಳ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, 2011ರ ಅಕ್ಟೋಬರ್ ನಂತರ ಜನಿಸಿದವರು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸುವಂತಿಲ್ಲ ಎಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಎಂಡೋಸಲ್ಫಾನ್ ಅನ್ನು ಕೇರಳದಲ್ಲಿ 2005ರ ಅಕ್ಟೋಬರ್ 25 ರಂದು ನಿಷೇಧಿಸಲಾಯಿತು. ಸರ್ಕಾರದ ಈಗಿನ ಹೊಸ ಆದೇಶವು ಎಂಡೋಸಲ್ಫಾನ್ ಪರಿಣಾಮವು ಆರು ವರ್ಷಗಳವರೆಗೆ ಮಾತ್ರ ಇರುತ್ತದೆ ಎಂಬ ಅಧ್ಯಯನವನ್ನು ಆಧರಿಸಿದೆ. ಇದರಿಂದ 6728 ಎಂಡೋ ಬಾಧಿತ ಮಕ್ಕಳು ನರಳುವಂತಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಹೊರಹಾಕಲ್ಪಟ್ಟ ಈ ಮಕ್ಕಳು ಐದು ಲಕ್ಷ ಆರ್ಥಿಕ ನೆರವು ಪಡೆಯಬೇಕಿದ್ದವರು. ಇವರಿಗೆ ಸರ್ಕಾರದ ಇತರೆ ಸವಲತ್ತುಗಳೂ ಲಭಿಸಬೇಕಿದೆ.
2011ರ ನಂತರವೂ ಸಾಕಷ್ಟು ಮಕ್ಕಳು ಸಂಕಷ್ಟದಲ್ಲಿಯೇ ಜನಿಸಿವೆ ಎನ್ನುತ್ತಾರೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವವರು. ಆರೋಗ್ಯ ಇಲಾಖೆಯ ಆದೇಶದ ಹಿಂದೆ ಸ್ಪಷ್ಟ ಷಡ್ಯಂತ್ರ ಅಡಗಿದೆ ಎಂದು ಸಂತ್ರಸ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.