ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಇಂಡಿಯಾ ಒಕ್ಕೂಟದ ಕೆಲ ನಾಯಕರು ಆಯಪಲ್ ಕಂಪನಿಯಿಂದ ತಮ್ಮ ಐಫೋನ್ಗಳಿಗೆ ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಿದ್ದು, ಇದು ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ ಪ್ರಯತ್ನ ಎಂದು ಆರೋಪ ಮಾಡಿದ್ದಾರೆ.
ಇದೀಗ ಫೋನ್ ಹ್ಯಾಕಿಂಗ್ ಅಥವಾ ಬೇಹುಗಾರಿಕೆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ಪೆಗಾಸಸ್ ಸ್ಪೈವೇರ್ ಪ್ರಕರಣವೂ ಸಹ ಮುನ್ನೆಲೆಗೆ ಬಂದಿದೆ. ಹೀಗಾಗಿ ಈ ಸಂದರ್ಭದಲ್ಲಿ ಪೆಗಾಸಸ್ ಪ್ರಕರಣದ ಬಗ್ಗೆ ಒಮ್ಮೆ ಮೆಲಕು ಹಾಕೋಣ.
ಅಂದಹಾಗೆ ಪೆಗಾಸಸ್ ಪ್ರಕರಣ 2019ರಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ವಾಟ್ಸ್ಆಯಪ್ಗೆ ಬಂದ ಮೆಸೇಜ್ ಮೂಲಕ ಪೆಗಾಸಸ್ ದಾಳಿ ವಿಚಾರ ಬಯಲಾಗಿತ್ತು. ಪಂಚದಾದ್ಯಂತದ ವಿವಿಧ ಸರ್ಕಾರಗಳು ಇದನ್ನು ಆಗಾಗ್ಗೆ ಬಳಸುತ್ತಿವೆ. ಪೆಗಾಸಸ್ ದಾಳಿ ಮಾಡಿರುವ ವಿಚಾರ ಆಗಾಗ ವರದಿಯಾಗುತ್ತಲೇ ಇದೆ. 2021ರಲ್ಲಿ ದಿ ಗಾರ್ಡಿಯನ್ ಹಾಗೂ ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ವಿವಿಧ ಪ್ರಮುಖ ನ್ಯೂಸ್ ವೆಬ್‌ಸೈಟ್ ಪೆಗಾಸೆಸ್ ಕುರಿತ ಸುದ್ದಿಯೊಂದನ್ನು ಪ್ರಕಟಿಸಿದ್ದವು. ಭಾರತದ 17 ಮಾಧ್ಯಮ ಸಂಸ್ಥೆಗಳ 40ಕ್ಕೂ ಹೆಚ್ಚು ಪತ್ರಕರ್ತರು, ಮಾನವ ಹಕ್ಕು ಕಾರ್ಯರ್ತರು, ಕೆಲವು ಉದ್ಯಮಿಗಳು ಹಾಗೂ ರಾಜಕಾರಣಿಗಳ ಫೋನ್ಗಳ ಮೇಲೆ ಪೆಗಾಸಸ್ ಬೇಹುಗಾರಿಕಾ ಸಾಫ್ಟ್ವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ವರದಿ ಮಾಡಿತ್ತು. ಆದರೆ, ಈ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿತ್ತು. ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಕೆಡಿಸುವ ಊಹೆಗಳು ಮತ್ತು ಉತ್ಪ್ರೇಕ್ಷೆಗಳ ಆಧಾರದ ಮೇಲೆ ವರದಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.
ಪೆಗಾಸಸ್ ಹುಟ್ಟು
ಈ ಪೆಗಾಸಸ್ ಬೇಹುಗಾರಿಕಾ ಸಾಫ್ಟ್ವೇರ್ ಅನ್ನು ಇಸ್ರೇಲಿ ಕಂಪನಿ ಎನ್ಎಸ್ಒ ಅಭಿವೃದ್ಧಿಪಡಿಸಿದೆ. ಸೈಬರ್ ಶಸ್ತ್ರಾಸ್ತ್ರ ತಯಾರಿಸುವಲ್ಲಿ ಈ ಕಂಪನಿ ಪರಿಣಿತಿ ಪಡೆದಿದೆ. ಇದಕ್ಕೆ ದಿ ಪೆಗಾಸಸ್ ಪ್ರಾಜೆಕ್ಟ್ ಎಂದು ಹೆಸರಿಡಲಾಗಿದೆ. 2016ರಲ್ಲಿ ಮೊದಲಿಗೆ ಇದು ಮುಖ್ಯವಾಹಿನಿಗೆ ಬಂದಿತು. ಅರಬ್ ಕಾರ್ಯಕರ್ತರೊಬ್ಬರು ಸಂಶಯಾಸ್ಪದ ಸಂದೇಶವೊಂದನ್ನು ಸ್ವೀಕರಿಸಿದ್ದರು. ಈ ವೇಳೆ ಪೆಗಾಸಸ್ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿತ್ತು. ಹಲವು ದಿನಗಳ ಆವಿಷ್ಕಾರದ ನಂತರ ಆಯಪಲ್ ಕಂಪನಿ ತನ್ನ ಐಒಎಸ್ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿತು, ಇದು ಫೋನ್‌ಗಳನ್ನು ಹ್ಯಾಕ್ ಮಾಡಲು ಪೆಗಾಸಸ್ ಬಳಸುತ್ತಿರುವ ಭದ್ರತಾ ಲೋಪದೋಷವನ್ನು ತೇಪೆ ಹಾಕಿತು. ಆದಾಗ್ಯೂ, ಪೆಗಾಸಸ್ ಐಫೋನ್ ಮಾತ್ರವಲ್ಲ ಆಯಂಡ್ರಯ್ಡ್ ಫೋನ್ಗಳ ಮೇಲೆಯೂ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಒಂದು ವರ್ಷದ ಹಿಂದೆ ಸಂಶೋಧಕರು ಪತ್ತೆ ಹಚ್ಚಿದರು. ಅಷ್ಟರಲ್ಲಾಗಲೇ ಸಾಕಷ್ಟು ಮಾಹಿತಿಗಳಿಗೆ ಕನ್ನ ಹಾಕಲಾಗಿತ್ತು. ಇದರ ಬೆನ್ನಲ್ಲೇ ಪೆಗಾಸಸ್ ಸೃಷ್ಟಿ ಮಾಡಿದ್ದಕ್ಕೆ ಎನ್ಎಸ್ಒ ಗ್ರೂಪ್ ವಿರುದ್ಧ 2019ರಲ್ಲಿ ಫೇಸ್ಬುಕ್ ದೂರು ನೀಡಿತ್ತು.
ಇಲ್ಲಿಂದಾಚೆಗೆ ಫೇಸ್‌ಬುಕ್‌ನ ಭದ್ರತಾ ಸಂಶೋಧಕರು ಪೆಗಾಸಸ್‌ನ ಬೆನ್ನಹಿಂದೆ ಬಿದ್ದಿದ್ದರು. ಭಾರತದಲ್ಲಿ ಹಲವಾರು ಪತ್ರಕರ್ತರು ಮತ್ತು ಕಾರ್ಯಕರ್ತರ ಮೇಲೆ ದಾಳಿ ಮಾಡಬಹುದಾದಂತ ತಂತ್ರಾಂಶವನ್ನು ಬಳಸಲಾಗಿದೆ ಎಂದು ಅವರು ಕಂಡುಕೊಂಡರು. ಅಲ್ಲದೆ, ಪೆಗಾಸಸ್ ಬಾಧಿತ ಭಾರತೀಯ ಬಳಕೆದಾರರಿಗೆ ವಾಟ್ಸಾಪ್ ಸಂದೇಶದ ಬಗ್ಗೆ ಎಚ್ಚರಿಕೆ ನೀಡಿದ ಸಮಯವೂ ಇದಾಗಿತ್ತು. ಇದರ ನಡುವೆ ಪೆಗಾಸಸ್ ಇರುವುದಾಗಿ ಇಸ್ರೇಲಿ ಕಂಪನಿ ಎನ್ಎಸ್ಒ ಕೂಡ ಖಚಿತಪಡಿಸಿತು. ಅಲ್ಲದೆ, ಪೆಗಾಸಸ್ ಅನ್ನು ತಾನು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ಅದರ ದುರುಪಯೋಗಕ್ಕೆ ನಾವು ಕಾರಣವಲ್ಲ ಎಂದು ಎನ್ಎಸ್ಒ ಸ್ಪಷ್ಟನೆ ನೀಡಿತು. ಅಲ್ಲದೆ, ಭಾರತದ ಮೇಲಿನ ದಾಳಿ ಆರೋಪವನ್ನು ಎನ್ಎಸ್ಒ ತಳ್ಳಿಹಾಕಿತ್ತು.
ಪೆಗಾಸಸ್ ಫೋನ್ ಹ್ಯಾಕ್ ಮಾಡುವುದು ಹೇಗೆ?
ಪೆಗಾಸಸ್ ದಾಳಿ ಮಾಡುವುದು ಕಣ್ಣಿಗೆ ಕಾಣುವುದಿಲ್ಲ. ತನ್ನ ಫೋನ್ ಪೆಗಾಸಸ್ನೊಂದಿಗೆ ರಾಜಿ ಮಾಡಿಕೊಂಡಿದೆ ಎಂಬ ಸಣ್ಣ ಸುಳಿವು ಕೂಡ ಬಳಕೆದಾರರಿಗೆ ತಿಳಿದಿರುವುದಿಲ್ಲ. ಯಾವ ಫೋನ್ಗೆ ಹ್ಯಾಕ್ ಮಾಡಬೇಕೆಂದು ಹ್ಯಾಕರ್ ನಿರ್ಧರಿಸುತ್ತಾನೋ, ಆ ಫೋನ್ಗೆ ಮೊದಲು ದುರುದ್ದೇಶಪೂರಿತ ವೆಬ್‌ಸೈಟ್ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಬಳಕೆದಾರ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಗೊತ್ತಿಲ್ಲದಂತೆ ಪೆಗಾಸಸ್ ಆತನ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗುತ್ತದೆ. ಇಷ್ಟೇ ಅಲ್ಲದೆ, ವಾಟ್ಸ್ಆಯಪ್ನಂತಹ ಆಯಪ್ಗಳ ಮೂಲಕ ವಾಯ್ಸ್ ಕಾಲ್ನಲ್ಲಿರುವ ಸೆಕ್ಯೂಟಿರಿ ಬಗ್ ಮೂಲಕವು ಇನ್ಸ್ಟಾಲ್ ಮಾಡಲಾಗುತ್ತದೆ. ಅಲ್ಲದೆ, ಕೇವಲ ಮಿಸ್ ಕಾಲ್ ಕೊಡುವ ಮೂಲಕವೂ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಬಹುದಾಗಿದೆ. ಒಂದು ಸಲ ಆಯಪ್ ಇನ್ಸ್ಟಾಲ್ ಆದರೆ, ಕಾಲ್ ಲಾಗ್ನಲ್ಲಿರುವ ನಂಬರ್ ಅನ್ನು ಡಿಲೀಟ್ ಮಾಡುತ್ತದೆ. ಇದರಿಂದ ಬಳಕೆದಾರರಿಗೆ ಮಿಸ್ ಕಾಲ್ ಬಂದಿರುವುದೇ ಗೊತ್ತಾಗುವುದಿಲ್ಲ.
ಪೆಗಾಸಸ್ ಏನು ಮಾಡುತ್ತದೆ?
ಪೆಗಾಸಸ್ ಒಮ್ಮೆ ಫೋನ್ನಲ್ಲಿ ಇನ್ಸ್ಟಾಲ್ ಆದರೆ, ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಬೇಹುಗಾರಿಕೆ ಮಾಡುತ್ತದೆ. ವಾಟ್ಸ್ಆಯಪ್ನಲ್ಲಿ ಮಾಡಿದ ಸಂಪೂರ್ಣ ಚಾಟ್ಸ್ ಅನ್ನು ಪೆಗಾಸಸ್ ಎನ್‌ಕ್ರಿಪ್ಟ್ ಮಾಡುತ್ತದೆ. ಮಸೇಜ್ ರೀಡಿಂಗ್, ಕಾಲ್ ಟ್ರ್ಯಾಕಿಂಗ್, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ಇಡುತ್ತದೆ. ಅಲ್ಲದೆ, ಸ್ಥಳದ ಮಾಹಿತಿಯನ್ನು ಕಲೆಹಾಕುತ್ತದೆ. ಫೋನ್ನಲ್ಲಿರುವ ಕ್ಯಾಮೆರಾ ವಿಡಿಯೋಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಮತ್ತು ಮೈಕ್ರೋಫೋನ್ ಮೂಲಕ ಫೋನ್ನ ಎಲ್ಲ ಚಟುವಟಿಕೆಯನ್ನು ತಿಳಿಸುತ್ತದೆ.
ಕಾಸ್ಪರ್ಸ್ಕಿ ಸಂಶೋಧಕರು 2017ರಲ್ಲಿ ಬರೆದಿದ್ದೇನು?
ನಾವು ಒಟ್ಟು ಕಣ್ಗಾವಲು ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇವೆ. ಪೆಗಾಸಸ್ ಒಂದು ಮಾಡ್ಯುಲರ್ ಬೇಹುಗಾರಿಕಾ ಸಾಫ್ಟ್ವೇರ್ ಆಗಿದೆ. ಬಳಕೆದಾರರ ಸಾಧನವನ್ನು ಸ್ಕ್ಯಾನ್ ಮಾಡಿದ ನಂತರ, ಬಳಕೆದಾರರ ಸಂದೇಶಗಳು ಮತ್ತು ಮೇಲ್ಗಳನ್ನು ಓದಲು, ಕರೆಗಳನ್ನು ಕೇಳಲು, ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯಲು, ಬ್ರೌಸರ್ ಇತಿಹಾಸ, ಸಂಪರ್ಕಗಳನ್ನು ಹೊರಹಾಕಲು ಮತ್ತು ಮುಂತಾದವುಗಳಿಗೆ ಅಗತ್ಯವಾದ ಮಾಡ್ಯೂಲ್‌ಗಳನ್ನು ಪೆಗಾಸಸ್ ಸ್ಥಾಪಿಸುತ್ತದೆ. ಮೂಲಭೂತವಾಗಿ, ಇದು ಗುರಿಯ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಕಣ್ಣಿಡುತ್ತದೆ. ಪೆಗಾಸಸ್ ಎನ್‌ಕ್ರಿಪ್ಟ್ ಮಾಡಿದ ಆಡಿಯೊ ಸ್ಟ್ರೀಮ್‌ಗಳನ್ನು ಸಹ ಕೇಳಬಹುದು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಓದಬಹುದು ಎಂಬುದು ಗಮನಾರ್ಹವಾಗಿದೆ. ಇದೊಂದು ಪರಮ ಕಣ್ಗಾವಲು ಸಾಧನವಾಗಿದ್ದು, ಯಾರ ಮೇಲಾದರೂ ಕಣ್ಣಿಡಲು ಸರ್ಕಾರ ಬಯಸಿದರೆ ಪೆಗಾಸಸ್ ಹೆಚ್ಚಿನ ಆದ್ಯತೆಯ ಆಯ್ಕೆಯಾಗಿರುತ್ತದೆ. ಪೆಗಾಸಸ್ ಸ್ಮಾರ್ಟ್ ಬೇಹುಗಾರಿಕಾ ಸಾಫ್ಟ್ವೇರ್ ಆಗಿದ್ದು, ಇದು ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುತ್ತಿರುವಾಗ ಪತ್ತೆಹಚ್ಚುವುದನ್ನು ತಪ್ಪಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಾಸ್ಪರ್ಸ್ಕಿ ಸಂಶೋಧಕರು ತಿಳಿಸಿದ್ದಾರೆ.