ಕಾಸರಗೋಡು: ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಲ್ಲಿ ಎರಡನೇ ವರ್ಷದ 'ಬೇಕಲ್ ಬೀಚ್ ಉತ್ಸವ-2023'ಕ್ಕೆ ಸಿದ್ಧತೆ ನಡೆಯುತ್ತಿದ್ದು, ಡಿ. 22ರಿಂದ 31ರ ವರೆಗೆ ವಿವಿಧಕಾರ್ಯಕ್ರಮಗಳೊಂದಿಗೆ ನಡೆಯಲಿರುವುದಾಗಿ ಬೇಕಲ ಬೀಚ್ ಉತ್ಸವ ಸಮಿತಿ ಅಧ್ಯಕ್ಷ, ಉದುಮ ಶಾಸಕ ಸಿ.ಎಚ್ ಕುಞಂಬು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮೊದಲನೇ ವರ್ಷದ ಬೇಕಲ ಬೀಚ್ ಉತ್ಸವದ ಯಶಸ್ಸಿನ ನಂತರ ಮತ್ತಷ್ಟು ಕಾರ್ಯಕ್ರಮಗಳೊಂದಿಗೆ ಕೇರಳದಲ್ಲೇ ಅತಿ ದೊಡ್ಡ ಉತ್ಸವವನ್ನಾಗಿ ಎರಡನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗುವುದು.
ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮ (ಬಿಆರ್‍ಡಿಸಿ), ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಪ್ರವಾಸೋದ್ಯಮ ಇಲಾಖೆ, ಕುಟುಂಬಶ್ರೀ ಮಿಷನ್, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಬೇಕಲ ಉತ್ಸವ ಆಯೋಜಿಸಲಾಗುತ್ತಿದ್ದು, ಯಶಸ್ವಿ ನಿರ್ವಹಣೆಗಾಗಿ ಸ್ವಾಗತ ಸಮಿತಿ ರಚಿಸಲಾಗಿದೆ. ಉದುಮ ಶಾಸಕ ಸಿಎಚ್ ಕುಂಜಂಬು ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪ್ರಧಾನ ಸಂಚಾಲಕರಾಗಿರುವ ಸಂಘಟನಾ ಸಮಿತಿ ಉತ್ಸವವನ್ನು ಮುನ್ನಡೆಸಲಿದೆ.
ಈ ಬಾರಿಯೂ ಉತ್ಸವದ ಟಿಕೆಟ್‍ಗಳ ಮಾರಾಟ ಜವಾಬ್ದಾರಿಯನ್ನು ಕುಟುಂಬಶ್ರೀಗೆ ವಹಿಸಿಕೊಡಲಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಕಾರದೊಂದಿಗೆ ಕಾರ್ಯಕರ್ತರು ಜಿಲ್ಲೆಯ ಮನೆಗಳಿಗೆ ತೆರಳಿ ಬೇಕಲ ಉತ್ಸವದ ಬಗ್ಗೆ ಮಾಹಿತಿ ನೀಡಲಿದ್ದು, ಜತೆಗೆ ಟಿಕೆಟ್ ಮಾರಾಟದ ವ್ಯವಸ್ಥೆ ನಿರ್ವಹಿಸಲಿದೆ. ಬೇಕಲ್ ಉತ್ಸವದ ಸಂದರ್ಭ ಶುಚಿತ್ವ ಕಾಪಾಡುವ ಸಂಕಲ್ಪದೊಂದಿಗೆ ಜಿಲ್ಲೆಯ ಹಸಿರು ಕ್ರಿಯಾ ಸೇನೆ ಈ ಬಾರಿ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿದೆ.
ಡಿಸೆಂಬರ್ 22 ರಂದು ಮ್ಯೂಸಿಕಲ್ ಬ್ರಾಂಡ್ ತೈಕುಡ ಬ್ರಿಡ್ಜ್ ತಂಡ ನಡೆಸಿಕೊಡುವ ಮ್ಯೂಸಿಕಲ್ ನೈಟ್ ಮೂಲಕ ಹತ್ತು ದಿನಗಳ ಕಲಾ ಮೇಳಕ್ಕೆ ಚಾಲನೆ ನೀಡಲಿದೆ. ಮೊದಲ ದಿನ ಕಾರ್ಯಕ್ರಮ ನೀಡುವ ಮೂಲಕ ಚಾಲನೆ ನೀಡಲಿದೆ. 23ರಂದು ಖ್ಯಾತ ಡ್ರಮ್ಮರ್ ಶಿವಮಣಿ, ಪ್ರಕಾಶ್ ಉಳ್ಳಿಯೇರಿ ಹಾಗೂ ಸಂಗೀತ ನಿರ್ದೇಶಕ ಶರತ್ ಅವರ ಸಂಗೀತ ಸಂಯೋಜನೆಯ ತ್ರಿಕೋನ ಮ್ಯೂಸಿಕಲ್ ಫ್ಯೂಷನ್ ನಡೆಯಲಿದೆ. 24 ರಂದು ಖ್ಯತ ಹಿನ್ನೆಲೆ ಗಾಯಕಿ ಕೆ.ಎಸ್. ಚಿತ್ರಾ ತಂಡದಿಂದ ಚಿತ್ರ ವಸಂತಂ, 25ರಂದು ಕ್ರಿಸ್ಮಸ್ ದಿನದಂದು ಎಂ.ಜಿ. ಶ್ರೀಕುಮಾರ್ ನೇತೃತ್ವದ ಮೆಗಾ ಸಂಗೀತ ಕಾರ್ಯಕ್ರಮ, ನ.26ರಂದು ನಟಿ ಶೋಭನಾ ಹಾಗೂ ಚೆನ್ನೈ ಕಲಾಕ್ಷೇತ್ರದ ವಿದ್ಯಾರ್ಥಿಗಳಿಂದ ನೃತ್ಯ ರಾತ್ರಿ ಸೇರಿದಂತೆ ಪ್ರತಿ ದಿನ ನಾನಾ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು. ಡಿಸೆಂಬರ್ 31 ರಂದು ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಮೆಗಾ ನ್ಯೂ ಇಯರ್ ನೈಟ್ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಜಿನ್ ಪರಂಬತ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್, ಟಿಕೆಟ್ ಮಾನಿಟರಿಂಗ್ ಸಮಿತಿ ಅಧ್ಯಕ್ಷ ಎಂ.ಎ ಲತೀಫ್, ಯಾತ್ರಾಶ್ರೀ ಮಹಾಪ್ರಬಂಧಕಿ ರಮ್ಯಾಕೃಷ್ಣನ್ ಉಪಸ್ಥಿತರಿದ್ದರು.