ನವದೆಹಲಿ: ಭಾರತವು ಈ ವರ್ಷದ ಮೊದಲ 9 ತಿಂಗಳು ಕಾಲ ಹವಾಮಾನಕ್ಕೆ ಸಂಬಂಧಿಸಿ ವಿಪರೀತ ಏರಿಳಿತಗಳಿಗೆ ಸಾಕ್ಷಿಯಾಗಿತ್ತು. ಹವಾಮಾನದಲ್ಲಿನ ಇಂಥ ವಿದ್ಯಮಾನವು ಕನಿಷ್ಠ 3 ಸಾವಿರ ಜನರ ಸಾವಿಗೆ ಕಾರಣವಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ವರದಿಯೊಂದು ಹೇಳಿದೆ.
ನವದೆಹಲಿ: ಭಾರತವು ಈ ವರ್ಷದ ಮೊದಲ 9 ತಿಂಗಳು ಕಾಲ ಹವಾಮಾನಕ್ಕೆ ಸಂಬಂಧಿಸಿ ವಿಪರೀತ ಏರಿಳಿತಗಳಿಗೆ ಸಾಕ್ಷಿಯಾಗಿತ್ತು. ಹವಾಮಾನದಲ್ಲಿನ ಇಂಥ ವಿದ್ಯಮಾನವು ಕನಿಷ್ಠ 3 ಸಾವಿರ ಜನರ ಸಾವಿಗೆ ಕಾರಣವಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ವರದಿಯೊಂದು ಹೇಳಿದೆ.
'ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವಿರಾನ್‍ಮೆಂಟ್' (ಸಿಎಸ್‌ಇ) ಎಂಬ ಸ್ವಯಂ ಸೇವಾ ಸಂಸ್ಥೆಯು ಈ ವರದಿಯನ್ನು ಬಿಡುಗಡೆ ಮಾಡಿದೆ.
ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಶೇ 86ರಷ್ಟು ದಿನಗಳಂದು ಹವಾಮಾನದಲ್ಲಿ ವಿಪರೀತ ಏರಿಳಿತ ಕಂಡುಬಂದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
'ಹವಾಮಾನ ವೈಪರೀತ್ಯದಿಂದಾಗಿ 2,923 ಜನರು ಮೃತಪಟ್ಟಿದ್ದಾರೆ. 20 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದರೆ, 80 ಸಾವಿರ ಮನೆಗಳು ನಾಶವಾಗಿದ್ದವು. 92 ಸಾವಿರಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ'.
' ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲ ದತ್ತಾಂಶಗಳನ್ನು ಸಂಗ್ರಹಿಸಿಲ್ಲ. ಹೀಗಾಗಿ, ಜೀವ ಮತ್ತು ಸ್ವತ್ತುಗಳ ಹಾನಿಯ ಪ್ರಮಾಣ ಇನ್ನೂ ಹೆಚ್ಚು ಇರುವ ಸಾಧ್ಯತೆ ಇದೆ' ಎಂದು ಸಿಎಸ್‌ಇ ನಿರ್ದೇಶಕಿ ಸುನಿತಾ ನಾರಾಯಣ ಹೇಳುತ್ತಾರೆ.
'ದೇಶದಲ್ಲಿ ಕಂಡುಬಂದ ಹವಾಮಾನ ವೈಪರೀತ್ಯ ಯಾವ ಸಂದರ್ಭದಲ್ಲಿ ಎಷ್ಟಿತ್ತು ಹಾಗೂ ಭೌಗೋಳಿಕವಾಗಿ ಹೇಗೆ ವ್ಯತ್ಯಾಸವಾಗಿತ್ತು ಎಂಬುದರ ಕುರಿತು ಪುರಾವೆಗಳ ಸಮೇತ ಮೌಲ್ಯಮಾಪನ ಮಾಡುವ ಪ್ರಯತ್ನ ಇದಾಗಿದೆ. ದೇಶವು ಈ ವರ್ಷ ಅಸಾಮಾನ್ಯ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ' ಎಂದು ಹೇಳಿದ್ದಾರೆ.
ಪ್ರದೇಶವಾರು ಅವಲೋಕಿಸಿದಾಗ, ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ 67 ದಿನಗಳ ಕಾಲ ವಿಪರೀತ ಹವಾಮಾನ ಏರಿಳಿತ ಕಂಡುಬಂದಿದೆ. ಈ ಅವಧಿಯಲ್ಲಿ 60 ಜನರು ಮೃತಪಟ್ಟಿದ್ದಾರೆ.
ನಂತರದ ಸ್ಥಾನದಲ್ಲಿರುವ ತೆಲಂಗಾಣದಲ್ಲಿ 62 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ 645 ಜಾನುವಾರುಗಳು ಮೃಪಟ್ಟಿವೆ.
ಇನ್ನು, ಕರ್ನಾಟಕದಲ್ಲಿಯೂ ಹಾನಿ ಪ್ರಮಾಣ ಹೆಚ್ಚು ದಾಖಲಾಗಿದ್ದು, 11 ಸಾವಿರ ಮನೆಗಳು ನಾಶವಾಗಿವೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.