ಬದಿಯಡ್ಕ: ಬದಿಯಡ್ಕ ಪಂಚಾಯತಿ ಬಂಟರ ಸಂಘದ ಆಶ್ರಯದಲ್ಲಿ ಒಳಮಲೆ ಜನನ ತರವಾಡು ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತುಡರ್ ಪರ್ಬ 2023 ವಿಶೇಷ ಕಾರ್ಯಕ್ರಮ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಿಯಡ್ಕ ಪಂಚಾಯತಿ ಸರ್ವಿಸ್ ಸೊಸೈಟಿಯ ಅಧ್ಯಕ್ಷ ನಿರಂಜನ್ ರೈ ಪೆರಡಾಲ ವಹಿಸಿದ್ದರು. ಒಳಮಲೆ ಜನನ ತರವಾಡಿನ ಯಜಮಾನ ಕುಂಞಣ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಾಹಿತಿ, ತುಳು ಸಂಘಟಕ ಶ್ರೀನಿವಾಸ ಆಳ್ವ ಕಳತ್ತೂರು ಬಂಟ ಸಮಾಜದಲ್ಲಿ ದೀಪಾವಳಿ ಹಬ್ಬದ ಆಚರಣೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಬಂಟ ಸಮಾಜದಲ್ಲಿ ಇಂದು ತುಳುನಾಡಿನ ಬಂಟರ ಆಚರಣೆಯ ರೀತಿಗಳು ಬದಲಾಗುತ್ತಾ ಪಾಶ್ಚಾತ್ಯ ಸಂಸ್ಕøತಿಯ ಆಚರಣೆಯನ್ನು ಅನುಸರಿಸಿ ಹೋಗುತ್ತಿರುವುದು ಕಳವಳಕಾರಿಯಾದುದಾಗಿದೆ. ನಮ್ಮ ಸಮಾಜದ ಮೂಲ ಸಂಸ್ಕೃತಿಯನ್ನು ಉಳಿಸಿ ಅದನ್ನು ಸಮಾಜ ಬಾಂಧವರಿಗೆ ಮನವರಿಕೆ ಮಾಡಿ ಕೊಡಬೇಕಾಗಿದೆ. ಈ ರೀತಿಯ ಕಾರ್ಯಕ್ರಮಗಳಿಂದ ಅದು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಕುಂಬಳೆÉ ಪಿರ್ಕಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಒಳಮಲೆ, ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಉಪಸ್ಥಿತರಿದ್ದು ಮಾತನಾಡಿದರು.
ಬದಿಯಡ್ಕ ಪಂಚಾಯತಿ ಬಂಟರ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಕೋಶಾಧಿಕಾರಿ ದಯಾನಂದ ರೈ ಮೇಗಿನ ಕಾಡರು, ಜೊತೆ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಸಮಾಜ ಬಾಂಧವರು ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ಸಮಾಜ ಬಾಂಧವರಿಗೆ ಗೂಡು ದೀಪ ಮತ್ತು ಭಾಷಣ ಸ್ಪರ್ಧೆ ಜರಗಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬದಿಯಡ್ಕ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕುಂಬಳೆ ವಲಯ ಬಂಟರ ಸಂಘದ ಜೊತೆ ಕಾರ್ಯದರ್ಶಿ ರವೀಂದ್ರನಾಥ ಶೆಟ್ಟಿ ವಳಮಲೆ ವಂದಿಸಿದರು.