ಕಾಸರಗೋಡು: ಪೆರಿಯ ಆಲಂಕೋಡ್ ಗೋಕುಲಂ ಗೋಶಾಲಾ ಸರಣಿ ವಿದ್ಯಾಪೀಠ-2023 ಸರಣಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ಖ್ಯಾತ ನೃತ್ಯಗಾರ್ತಿ ಪದ್ಮಾ ಸುಬ್ರಹ್ಮಣ್ಯಂ ಅವರಿಗೆ "ಪರಂಪರ ನಾಟ್ಯ ಭೂಷಣ" ಪ್ರಶಸ್ತಿಯನ್ನು ನೀಡಲಾಗುವುದು ಎಂದು ಗೋಶಾಲಾ ಸಮಿತಿ ಪದಾಧಿಕಾರಿ ವಿಷ್ಣು ಪ್ರಸಾದ್ ಹೆಬ್ಬಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ವಿದೇಶಗಳಲ್ಲಿ ಭರತನಾಟ್ಯವನ್ನು ಜನಪ್ರಿಯಗೊಳಿಸಲು ಮತ್ತು ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ಆಳವಾದ ಅಧ್ಯಯನವನ್ನು ನಡೆಸುವ ಮೂಲಕ ಕಳೆದುಹೋದ ಅನೇಕ ಮುದ್ರೆಗಳು ಮತ್ತು ಕರಣಗಳನ್ನು ಮರಳಿ ತರಲು ನೀಡಿದ ಸಮಗ್ರ ಕೊಡುಗೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕøತರಿಗೆ 51,000 ರೂಪಾಯಿ ಮತ್ತು ಫಲಕ ಒಳಗೊಂಡಿದೆ.
ಕಾಞಂಗಾಡಿನ ಖ್ಯಾತ ಕರ್ನಾಟಕ ಸಂಗೀತಗಾರ ಮತ್ತು ನಿವೃತ್ತ ಶಿಕ್ಷಕ ವೆಳ್ಳಿಕ್ಕೋತ್ ವಿಷ್ಣು ಭಟ್ ಅವರಿಗೆ 2023 ರ ಸರಣಿ ಗುರು ರತ್ನ ಪ್ರಶಸ್ತಿ ನೀಡಿ ಗ್ವರವಿಸಲಾಗುವುದು. ಪ್ರಶಸ್ತಿ ಪುರಸ್ಕøತರಿಗೆ 30000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು.
ಉದಯೋನ್ಮುಖ ಯುವ ಪಿಟೀಲು ವಾದಕ ಅಲಂಕೋಡ್ ಗೋಕುಲ್ ಮತ್ತು ಬೆಂಗಳೂರಿನ ಸ್ಥಳೀಯ ಗಾಯಕಿ ವಿಭಾ ರಾಜೀವ್ ಅವರಿಗೆ ಯುವ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ 25ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುವುದು. ನ. 10 ರಿಂದ 19 ರವರೆಗೆ ಗೋಕುಲಂ ಗೋಶಾಲೆಯಲ್ಲಿ ನಡೆಯುವ ದೀಪಾವಳಿ ಸಂಗೀತೋತ್ಸವದ ಸಮಾರೋಪ ದಿನದಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ವಿನೋದ್ ಕೃಷ್ಣನ್ ಕೆ.ಪಿ, ಪದ್ಮರಾಜನ್ ಪಿ.ವಿ, ಶಿವಪ್ರಸಾದ್, ಗುರುದತ್ ಕಾಞಂಗಾಡ್, ಕೆ ಎನ್ ಭಟ್, ಮನೋಜ್ ಪೂಚ್ಕಾಡ್, ಪಲ್ಲವನಾರಾಯಣ ಉಪಸ್ಥಿತರಿದ್ದರು.