ಬೆಂಗಳೂರು: ಇನ್ಫೊಸಿಸ್ ಸೈನ್ಸ್ ಫೌಂಡೇಷನ್, ಆರು ವಿಭಾಗಗಳಲ್ಲಿ ‘ಇನ್ಫೊಸಿಸ್ ಪ್ರಶಸ್ತಿ – 2023’ ಅನ್ನು ಬುಧವಾರ ಘೋಷಿಸಿದೆ. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವ ಶಾಸ್ತ್ರ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಆರು ವಿಭಾಗಗಲ್ಲಿ ಪ್ರಶಸ್ತಿ ಪ್ರಕಟಿಸಲಾಗಿದೆ.
2008ರಲ್ಲಿ ಆರಂಭ ಆದಾಗಿನಿಂದಲೂ ಇನ್ಫೊಸಿಸ್ ಪ್ರಶಸ್ತಿಯು, ಈ ಪ್ರಶಸ್ತಿಗೆ ಭಾಜನರಾದವರ ಸಾಧನೆಗಳನ್ನು ಗೌರವಿಸುವ ಕೆಲಸ ಮಾಡಿದೆ. ಭಾರತದ ಮೇಲೆ ಪರಿಣಾಮ ಬೀರುವಂತಹ ಅವರ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಅವರ ಪಾಂಡಿತ್ಯಕ್ಕೆ ಮನ್ನಣೆ ನೀಡಿದೆ. ಪ್ರತಿ ವಿಭಾಗದಲ್ಲಿ ನೀಡುವ ಪ್ರಶಸ್ತಿಯು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು 1 ಲಕ್ಷ ಅಮೆರಿಕನ್ ಡಾಲರ್ (ಅಥವಾ ರೂಪಾಯಿ ಲೆಕ್ಕದಲ್ಲಿ ಅದಕ್ಕೆ ಸಮನಾದ ಮೊತ್ತ) ನಗದನ್ನು ಒಳಗೊಂಡಿದೆ. ಪ್ರಶಸ್ತಿಗೆ ನಾಮನಿರ್ದೇಶಿತ ಆಗಿದ್ದ 224 ಹೆಸರುಗಳ ಪೈಕಿ, ಆರು ಮಂದಿಯನ್ನು ತೀರ್ಪುಗಾರರ ಅಂತರರಾಷ್ಟ್ರೀಯ ಸಮಿತಿಯು ಅಂತಿಮಗೊಳಿಸಿದೆ.
ಆರು ವಿಭಾಗಗಳಲ್ಲಿ ಇನ್ಫೊಸಿಸ್ ಪ್ರಶಸ್ತಿಯನ್ನು ಪಡೆದವರ ಹೆಸರು
ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ
ಐಐಟಿ–ಕಾನ್ಪುರದ ಸುಸ್ಥಿರ ಇಂಧನ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಚ್ಚಿದಾನಂದ ತ್ರಿಪಾಠಿ ಅವರಿಗೆ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಇನ್ಫೊಸಿಸ್ ಪ್ರಶಸ್ತಿ ನೀಡಲಾಗಿದೆ.
ಸೆನ್ಸಾರ್ ಆಧಾರಿತ ವಾಯು ಗುಣಮಟ್ಟ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಘೋಷಿಸಲಾಗುತ್ತಿದೆ. ವಾಯು ಗುಣಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಮಾಲಿನ್ಯವನ್ನು ಬಹಳ ಸ್ಥಳೀಯ ಮಟ್ಟದಲ್ಲಿ ಅಳತೆ ಮಾಡುವುದು, ದತ್ತಾಂಶ ರೂಪಿಸುವುದು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್ ಲರ್ನಿಂಗ್ ಸೌಲಭ್ಯ ಬಳಸಿಕೊಂಡು ವಿಶ್ಲೇಷಣೆ ನಡೆಸುವುದಕ್ಕೆ ಅವರು ನೀಡಿದ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಚಳಿಗಾಲದಲ್ಲಿ ದೆಹಲಿಯಲ್ಲಿ ಸೃಷ್ಟಿಯಾಗುವ ಮುಸುಕಿನ ವಾತಾವರಣವು ದೆಹಲಿಯಲ್ಲಿ ಹಾಗೂ ಬೇರೆ ನಗರಗಳಲ್ಲಿ ಭಿನ್ನವಾಗಿರುತ್ತವೆ ಎಂಬುದನ್ನು ಕಂಡುಕೊಳ್ಳುವಲ್ಲಿ ತ್ರಿಪಾಠಿ ಅವರ ಕೊಡುಗೆ ಮಹತ್ವದ್ದಾಗಿದೆ. ಇದು ಭಾರತದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಮಹತ್ವದ ಕೊಡುಗೆ ನೀಡಬಲ್ಲದು.
ಮಾನವ ಶಾಸ್ತ್ರ
ಈ ಸಾಲಿನ ಮಾನವ ಶಾಸ್ತ್ರ ವಿಭಾಗದ ಇನ್ಫೊಸಿಸ್ ಪ್ರಶಸ್ತಿ ಜಾಹ್ನವಿ ಫಾಲ್ಕೆ ಅವರಿಗೆ ಸಂದಿದೆ. ಜಾಹ್ನವಿ ಅವರು ಸೈನ್ಸ್ ಗ್ಯಾಲರಿ ಬೆಂಗಳೂರು ಇದರ ಸಂಸ್ಥಾಪಕ ನಿರ್ದೇಶಕಿ. ಆಧುನಿಕ ಭಾರತದ ವೈಯಕ್ತಿಕ, ಸಾಂಸ್ಥಿಕ ಹಾಗೂ ಭೌತಿಕ ವಸ್ತುಗಳ ವೈಜ್ಞಾನಿಕ ಸಂಶೋಧನೆಗಳ ಇತಿಹಾಸದ ವಿಚಾರವಾಗಿ ಅವರು ನೀಡಿರುವ ಅಸಾಮಾನ್ಯ ಕೊಡುಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜೀವ ವಿಜ್ಞಾನ
ಜೀವ ವಿಜ್ಞಾನ ವಿಭಾಗದಲ್ಲಿ ಐಐಟಿ–ಕಾನ್ಪುರದ ಬಯೋಎಂಜಿನಿಯರಿಂಗ್ ಮತ್ತು ಜೀವವಿಜ್ಞಾನ ಪ್ರೊಫೆಸರ್ ಅರುಣ್ ಕುಮಾರ್ ಶುಕ್ಲಾ ಅವರಿಗೆ ಸಂದಿದೆ. ಜಿ–ಪ್ರೊಟೀನ್ ಕಪಲ್ಡ್ ರಿಸೆಪ್ಟರ್ (ಜಿಪಿಸಿಆರ್) ಜೀವವಿಜ್ಞಾನಕ್ಕೆ ಅವರು ನೀಡಿರುವ ಅಸಾಮಾನ್ಯ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರೊ. ಶುಕ್ಲಾ ಅವರ ಸಂಶೋಧನೆಯು ಜಿಪಿಸಿಆರ್ ಬಗ್ಗೆ ಹೊಸ ಅರಿವನ್ನು ನೀಡಿದೆ. ಹೊಸ ಮತ್ತು ಪರಿಣಾಮಕಾರಿ ಚಿಕಿತ್ಸಾ ಕ್ರಮಗಳನ್ನು ರೂಪಿಸಲು ಇವರ ಸಂಶೋಧನೆಯು ನೆರವಾಗಿದೆ.
ಗಣಿತ ವಿಜ್ಞಾನ
ಗಣಿತ ವಿಜ್ಞಾನ ವಿಭಾಗದಲ್ಲಿ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಹಾಗೂ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿಯ ಫರ್ನ್‌ಹಾಲ್ಜ್ ಜಾಯಿಂಟ್ ಪ್ರೊಫೆಸರ್ ಆಗಿರುವ ಭಾರ್ಗವ್ ಭಟ್ ಅವರಿಗೆ ಸಂದಿದೆ. ಪ್ರೊ. ಭಟ್ ಅವರು ಜರ್ಮನಿಯ ಗಣಿತಶಾಸ್ತ್ರಜ್ಞ ಪೀಟರ್ ಶಾಲ್ಜ್ ಅವರ ಜೊತೆ ಸೇರಿ ಪ್ರಿಸ್ಮ್ಯಾಟಿಕ್ ಕೊಹೊಮಾಲಜಿ ಕ್ಷೇತ್ರದಲ್ಲಿ ನಡೆಸಿರುವ ಕೆಲಸಗಳು ಈ ಕ್ಷೇತ್ರದಲ್ಲಿ ಹೊಸ ಆಲೋಚನೆಗಳು ಮತ್ತು ಪದ್ಧತಿಗಳನ್ನು ರೂಪಿಸಿವೆ.
ಭೌತವಿಜ್ಞಾನ
ಭೌತ ವಿಜ್ಞಾನ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್‌ನ ಜೀವರಸಾಯನಶಾಸ್ತ್ರ, ಜೀವಭೌತವಿಜ್ಞಾನ ಮತ್ತು ಬಯೋಇನ್ಫಾರ್ಮೆಟಿಕ್ಸ್ ವಿಭಾಗದ ಪ್ರೊಫೆಸರ್ ಮುಕುಂದ್ ಥಟ್ಟೈ ಅವರಿಗೆ ಸಂದಿದೆ. ವಿಕಾಸಾತ್ಮಕ ಜೀವಕೋಶ ಜೀವವಿಜ್ಞಾನದಲ್ಲಿ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ ಈ ಗೌರವ ಸಲ್ಲಿಸಲಾಗುತ್ತಿದೆ.
ಸಮಾಜ ವಿಜ್ಞಾನ
ಸಮಾಜ ವಿಜ್ಞಾನ ವಿಭಾಗದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪ್ರೊಫೆಸರ್ ಕರುಣಾ ಮಂತೆನಾ ಅವರಿಗೆ ಸಂದಿದೆ. ಸಾಮ್ರಾಜ್ಯಶಾಹಿ ಸಿದ್ಧಾಂತವು ಆಧುನಿಕ ಸಾಮಾಜಿಕ ಸಿದ್ಧಾಂತದ ಉಗಮದಲ್ಲಿ ಅತ್ಯಂತ ಪ್ರಮುಖವಾದ ಒಂದು ಅಂಶವಾಯಿತು ಎಂಬ ಪ್ರತಿಪಾದನೆಯ ಕುರಿತು ಅವರ ಮಹತ್ವದ ಸಂಶೋಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.