ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮೊಹಮ್ಮದ್ ಶಮಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬಿಜೆಪಿ ನಾಯಕ ಅನಿಲ್ ಬಲುನಿ ಅವರ ದೆಹಲಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಈಗಾಸ್ ಆಚರಣೆಯಲ್ಲಿ ಮೊಹಮ್ಮದ್ ಶಮಿ ಪಾಲ್ಗೊಂಡಿದ್ದರು. ಈಗಾಸ್ ಉತ್ತರಾಖಂಡದ ಪ್ರಾಚೀನ ಸಾಂಪ್ರದಾಯಿಕ ಹಬ್ಬವಾಗಿದ್ದು, ಈ ಕಾರ್ಯಕ್ರಮದಲ್ಲಿ ಶಮಿ ಅಲ್ಲದೆ, ಗೃಹ ಸಚಿವ ಅಮಿತ್ ಶಾ ಮತ್ತು ಅಜಿತ್ ದೋವಲ್ ಸೇರಿದಂತೆ ಬಿಜೆಪಿಯ ಹಲವಾರು ಪ್ರಮುಖ ನಾಯಕರು ಭಾಗವಹಿಸಿದ್ದರು. ಖ್ಯಾತ ಬಾಲಿವುಡ್ ಗಾಯಕ ಜುಬಿನ್ ನೌಟಿಯಾಲ್ ಸಹ ಕಾರ್ಯಕ್ರಮದ ಭಾಗವಾಗಿದ್ದರು.
ಶಮಿ ಬಿಜೆಪಿ ಸೇರುತ್ತಾರಾ?
ಅಮಿತ್ ಶಾ ಮತ್ತು ದೋವಲ್ ಜೊತೆಗಿರುವ ಶಮಿ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅವರು ಕೇಸರಿ ಪಕ್ಷ ಸೇರುವ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಬಿಜೆಪಿಯ ಇತ್ತೀಚಿನ ಬೆಳವಣಿಗೆಗಳು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿವೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಂಪ್ರದಾಯಿಕವಾಗಿ ಅಲ್ಪಸಂಖ್ಯಾತರಿಗೆ ಒಲವು ತೋರುವವರಲ್ಲ, ಅನಿರೀಕ್ಷಿತವಾಗಿ ಶಮಿ ಅವರ ಸ್ಥಳೀಯ ಗ್ರಾಮವಾದ ಅಮ್ರೋಹಾದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದಾಗಿ ಘೋಷಿಸಿದಾಗ ಮೊದಲ ಬಾರಿಗೆ ಆಶ್ಚರ್ಯ ಉಂಟಾಗಿತ್ತು. ವಿಶ್ವಕಪ್‌ನಲ್ಲಿ ಶಮಿ ಅವರ ಅತ್ಯುತ್ತಮ ಪ್ರದರ್ಶನವನ್ನು ಅವರು ಒಪ್ಪಿದರು.
ತರುವಾಯ, ಫೈನಲ್‌ನಲ್ಲಿ ಭಾರತದ ನಿರಾಶಾದಾಯಕ ಸೋಲಿನ ನಂತರ, ಪ್ರಧಾನಿ ಮೋದಿ ಅವರು ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಮಿಯನ್ನು ಆಲಂಗಿಸಿಕೊಂಡು ಅವರಿಗೆ ಸಾಂತ್ವನ ಹೇಳಿದರು. ಈ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.