ಅಹಮದಾಬಾದ್: ಗುಜರಾತ್‌ನ ವಿವಿಧೆಡೆ ಭಾನುವಾರ ಸುರಿದ ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು 20 ಮಂದಿ ಮೃತಪಟ್ಟಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟಕ್ಕೀಡಾಗಿದ್ದು, ರೈತರು ಕಂಗಾಲಾಗಿದ್ದಾರೆ.
ದಾಹೋದ್ ಜಿಲ್ಲೆಯಲ್ಲಿ 4, ಭರೂಚ್ 3, ತಾಪಿ 2 ಸೇರಿದಂತೆ ಅಹಮದಾಬಾದ್, ಅಮ್ರೇಲಿ, ಬನಸ್ಕಾಂತ, ಬೋಟಡ್, ಖೇಡಾ, ಮೆಹಸಾನ, ಪಂಚಮಹಲ್, ಸಬರಕಾಂತ, ಸೂರತ್, ಸುರೇಂದ್ರನಗರ, ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಮಾಹಿತಿ ನೀಡಿದೆ.
ರಾಜ್‌ಕೋಟ್‌ನ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ರಾಜ್ಯದ 252 ತಾಲ್ಲೂಕುಗಳ ಪೈಕಿ 234ರಲ್ಲಿ ಭಾರೀ ಮಳೆ ಸುರಿದಿದೆ. ಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಬರೂಚ್ ಹಾಗೂ ಅಮ್ರೇಲಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 16 ಗಂಟೆಗಳ ಅವಧಿಯಲ್ಲಿ 50ರಿಂದ 117 ಮಿ.ಮೀ ಮಳೆ ಸುರಿದಿದೆ.
ಮೊರ್ಬಿ ಜಿಲ್ಲೆಯ ಸೌರಾಷ್ಟ್ರ ಭಾಗದಲ್ಲಿ ಸೆರಾಮಿಕ್ ಕೈಗಾರಿಕಾ ಚಟುವಟಿಕೆಗಳ ಮೇಲೆ ಮಳೆ ಪರಿಣಾಮ ಬೀರಿದೆ. ಹಲವು ಕಾರ್ಖಾನೆಗಳ ಕಾರ್ಯ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ದಕ್ಷಿಣ ಗುಜರಾತ್ ಹಾಗೂ ಸೌರಾಷ್ಟ್ರ ಭಾಗದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸೋಮವಾರ ಮಳೆಯ ಪ್ರಮಾಣ ತಗ್ಗಿದೆ' ಎಂದು ಅಹಮದಾಬಾದ್‌ನ ಹವಾಮಾನ ಕೇಂದ್ರದ ನಿರ್ದೇಶಕರಾದ ಮನೋರಮಾ ಮೊಹಂತಿ ತಿಳಿಸಿದ್ದಾರೆ.
ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಸೌರಾಷ್ಟ್ರ ಹಾಗೂ ಕಚ್ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ಹೇಳಿದೆ.