ಕಾಸರಗೋಡು: ಸಂಚರಿಸುವ ಸಚಿವ ಸಂಪುಟ ಎಂಬ ವಿಶೇಷತೆಯೊಂದಿಗೆ ರಾಜ್ಯದ 140ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲುದ್ದೇಶಿಸಿರುವ ನವಕೇರಳ ಸಮಾವೇಶದ ರಾಜ್ಯಮಟ್ಟದ ಕಾರ್ಯಕ್ರಮ ಮಂಜೇಶ್ವರದ ಪೈವಳಿಕೆಯಲ್ಲಿ ಶನಿವಾರ ಸಂಭ್ರಮದ ಚಾಲನೆ ನೀಡಲಾಯಿತು.
ಅರ್ಧ ತಾಸು ವಿಳಂಬವಾಗಿ ಆರಂಭಗೊಂಡ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೇರಳದಲ್ಲಿ ಎಡರಂಗ ಸರ್ಕಾರ ನಡೆಸಿರುವ ಅಭಿವೃದ್ಧಿ ಕಾರ್ಯಗಳಿಂದ ಎರಡನೇ ಬಾರಿಗೆ ಪಕ್ಷ ಅಧಿಕಾರಕ್ಕೇರಲು ಸಾಧ್ಯವಾಗಿರುವುದಾಗಿ ತಿಳಿಸಿದರು. ಕರೊನಾ, ಓಖಿ, ನಿಫಾ ಸೇರಿದಂತೆ ವಿವಿಧ ಸಂಕಷ್ಟಗಳನ್ನು ಮೀರಿನಿಂತು ಅಭಿವೃದ್ಧಿ ಕಾರ್ಯಗಳನ್ನು ಸಾಧಿಸುವಲ್ಲಿ ಕೇರಳಕ್ಕೆ ಸಾಧ್ಯವಾಗಿದೆ.
ಮುಂದಿನ 25 ವರ್ಷ ಕಾಲಾವಧಿಯಲ್ಲಿ ಕೇರಳವನ್ನು ದೇಶದ ಅತ್ಯಂತ ಪ್ರಗತಿಪರ ರಾಜ್ಯವನ್ನಗಿ ರೂಪಿಸುವುದು ಎಡರಂಗದ ಧ್ಯೇಯವಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರು ಆರ್ಥಿಕ ನೀತಿ ಸಾಮಾಜಿಕ, ಸಮೂಹಿಕ ಅಭಿವೃದ್ಧಿಗೆ ಪೂರಕವಾಗಿದೆ. ಸಾಮಾಜಿಕ ಪಿಂಚಣಿ ವ್ಯವಸ್ಥೆ, ಕೈಗಾರಿಕೆ, ಆರೋಗ್ಯ, ವಿದ್ಯುತ್ ರಂಗದಲ್ಲಿನ ಪ್ರಗತಿ ಪ್ರತಿಪಕ್ಷಗಳನ್ನು ಕಂಗೆಡಿಸಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರ ದ್ರೋಹ ಬಗೆಯುತ್ತಿದೆ. ರಾಜ್ಯಕ್ಕೆ ಲಭಿಸಬೇಕಾದ ಮೊತ್ತದಲ್ಲಿ ಗಣನೀಯ ಕಡಿತವುಂಟುಮಾಡಿ, ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಯತ್ನಿಸುತ್ತಿದೆ. ಜಿಎಸ್‍ಟಿ ನಷ್ಟ ಪರಿಹಾರ ನೀಡುವಲ್ಲೂ ತಾರತಮ್ಯ ನಡೆಸಿದೆ. ತಪ್ಪು ಆರ್ಥಿಕ ನೀತಿಯಿಂದ ದೇಶದ ಆರ್ಥಿಕ ಸಂಪನ್ನರು ಮತ್ತಷ್ಟು ಶ್ರೀಮಂತರಾಗುತ್ತಿದ್ದರೆ, ಬಡವರು ಮತ್ತಷ್ಟು ಬಡತನ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ಒಂದು ತಾಸು ಕಾಲ ಸುದೀರ್ಘ ಭಾಷಣ ಮಾಡಿದ ಮುಖ್ಯಮಂತ್ರಿ ರಾಜ್ಯದ ಸಾಧನೆಯನ್ನು ಒಂದೊಂದಾಗಿ ಜನತೆಯ ಮುಂದಿಟ್ಟರು.
ಕಂದಾಯ ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಡರಂಗ ಆಡಳಿತ ಜನಸಮಾನ್ಯರಿಗೆ ಹೆಚ್ಚಿನ ಕೊಡುಗೆಯನ್ನು ನಿಡಿದೆ. ಮಂಜೇಶ್ವರ ತಾಲೂಕು ರಚನೆ, ತಾಲೂಕು ಕಚೇರಿ ಮಂಜೂರು ಎಲ್ಲ ಎಡರಂಗದ ಕೊಡುಗೆಯಾಗಿದೆ. ರಾಜ್ಯದ ಜನತೆ ಅಂಗೀಕರಿಸಿರುವ ನವಕೇರಳ ಸಮಾವೇಶವನ್ನು ಪ್ರತಿಪಕ್ಷಗಳ ಟೀಕೆಯಿಂದ ಬುಡಮೇಲುಗೊಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಸಚಿವ ಅವರ ವಾಹನದಲ್ಲಿ ಬೆಂಗಾವಲಿನೊಂದಿಗೆ ತೆರಳುವುದನ್ನು ತಪ್ಪಿಸಲು ಸಿಎಂ ಸೇರಿದಂತೆ ಎಲ್ಲ ಸಚಿವರ ಪ್ರಯಾಣಕ್ಕಾಗಿ ಬಸ್ಸಿನ ವ್ಯವಸ್ಥೆ ಏರ್ಪಡಿಸಲಾಗಿದೆ.
ಬಸ್ ಯಾತ್ರೆ ಬಗ್ಗೆ ಅವಹೇಳನಕಾರಿ ಹಾಗೂ ಸುಳ್ಳು ಪ್ರಚಾರ ನಡೆಸುತ್ತಿರುವವರ ಉದ್ದೇಶ ಎಂದಿಗೂ ಈಡೇರದು ಎಂದು ಕಂದಾಯ ಸಚಿವ ಕೆ. ರಾಜನ್ ತಿಳಿಸಿದರು.
ಪತ್ರಕರ್ತರನ್ನು ಬಸ್ ಪ್ರಯಾಣಕ್ಕೆ ಆಹ್ವಾನಿಸಿದ ಸಿಎಂ:
ನವಕೇರಳ ಸಮಾವೇಶಕ್ಕೆ ಸಿಎಂ ಹಾಗೂ ಸಂಪುಟ ಸಚಿವರಿಗೆ ಸಂಚಾರಕ್ಕೆ ಸಿದ್ಧಪಡಿಸಲಾದ ಬಸ್ಸಿನ ಬಗ್ಗೆ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿ, ನವಕೇರಳ ಸಮವೇಶ ಕಳೆದ ನಂತರ ನಾವೆಲ್ಲರೂ ಇದೇ ಬಸ್ಸಿನಲ್ಲಿ ಕಾಸರಗೋಡಿಗೆ ತೆರಳಲಿದ್ದೇವೆ. ಬಸ್ಸಿನಲ್ಲೆ ಏನೆಲ್ಲ ಆಡಂಬರ ವಯಯವಸ್ಥೆ ಇದೆ ಎಂಬುದನ್ನು ಬಸ್ಸಿಗೆ ಏರಿ ಒಳಗೆ ಸಂಚರಿಸಿ ಖುದ್ದು ಪರಿಶೀಲಿಸಬಹುದು ಎಂದು ಪತ್ರಕರ್ತರಿಗೆ ಆಹ್ವಾನ ನೀಡಿದರು.
ಸಚಿವರಾದ ಅಹಮ್ಮದ್ ದೇವರ್‍ಕೋವಿಲ್, ರೋಶಿ ಅಗಸ್ಟಿನ್, ಎ.ಕೆ ಶಶೀಂದ್ರನ್, ಕೆ. ಕೃಷ್ಣನ್ ಕುಟ್ಟಿ, ಆಂಟನಿ ರಾಜು, ಕೆ. ರಾಧಾಕೃಷ್ಣನ್, ಕೆ.ಎನ್ ಬಾಲಗೋಪಾಲನ್, ಪಿ.ರಾಜು, ಜೆ. ಚಿಂಚುರಾಣಿ, ವಿ.ಎನ್. ವಾಸವನ್, ಸಜಿ ಚೆರಿಯನ್, ಪಿ.ಎ. ಮಹಮ್ಮದ್ ರಿಯಾಸ್, ಪಿ. ಪ್ರಸಾದ್, ವಿ.ಶಿವನ್ ಕುಟ್ಟಿ, ಎಂ.ಬಿ ರಾಜೇಶ್, ಜಿ.ಆರ್. ಅನಿಲ್, ಆರ್. ಬಿಂದು, ವೀಣಾ ಜಾರ್ಜ್, ಎ. ಅಬ್ದುಲ್ ರಹಮಾನ್, ಶಾಸಕರಾದ ಸಿ.ಎಚ್ ಕುಞಂಬು, ಕೆ. ರಾಜಗೋಪಾಲನ್, ಇ.ಚಂದ್ರಶೇಖರನ್, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಮಾಜಿ ಸಚಿವರಾದ ಪಿ.ಜಯರಾಜನ್, ಪಿ.ಕೆ ಶ್ರೀಮತಿ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಮುಖ್ಯ ಕಾರ್ಯದರ್ಶಿ ವಿ.ವೇಣು ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ಮಾಲಿನ್ಯ ಮುಕ್ತ ಕೇರಳ ಪ್ರತಿಜ್ಞೆ ಸ್ವೀಕರಿಸಲಾಯಿತು. ಸರ್ಕಾರದ ಕಾರ್ಯಕ್ರಮವಾಗಿದ್ದರೂ, ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು. ಐದು ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ವೆದಿಕೆಯಲ್ಲಿದ್ದ ಸಿಎಂ ಪಿಣರಾಯಿ ವಇಜಯನ್ ಹಾಗೂ ಎಲ್ಲ ಸಚಿವರನ್ನು ಪೇಟ ತೊಡಿಸಿ ಸ್ವಾಗತಿಸಲಾಯಿತು.
ಚುನಾವಣಾ ಪ್ರಚಾರ:
ಇದೊಂದು ಚುನಾವಣಾ ಪ್ರಚಾರದ ತಂತ್ರವಾಗಿದ್ದು, ಜನರನ್ನು ಕೊಳ್ಳೆ ಹೊಡೆಯಲಿರುವ ಸಮಾವೇಶವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಟೀಕಿಸಿದೆ. ಸಾಮಾಜಿಕ ಪಿಂಚಣಿ, ಕೆಎಸ್ಸಾರ್ಟಿಸಿ ನೌಕರರಿಗೆ ವೇತನ ವಿತರಣೆ ಸೇರಿದಂತೆ ವಿವಿಧ ವಲಯಗಳಲ್ಲಿ ವೈಫಲ್ಯ ಎದುರಿಸುತ್ತಿರುವ ಸರ್ಕಾರ ಜನಸಾಮಾನ್ಯರನ್ನು ಕೊಳ್ಳೆ ಹೊಡೆಯಲು ಸಮವೇಶ ಆಯೋಜಿಸಿರುವುದಾಗಿ ಬಿಜೆಪಿ ಆರೋಪಿಸಿದೆ.
ಇಂದು ಕಾಸರಗೋಡು ಸಮಾವೇಶ:
ನ. 19ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ವಿಧಾನಸಭಾ ಕ್ಷೆತ್ರದ ಸಮವೇಶ ಚೆಂಗಳ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿರುವುದು. ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಜಿಲ್ಲೆಯ ಗಣ್ಯರುನ್ನು ಒಳಗೊಂಡ ಪ್ರಭಾತ ಸಭೆಯನ್ನು ಕಾಸರಗೋಡು ನಗರಸಭಾಂಗಣದಲ್ಲಿ ಆಯೋಜಿಸಿದ್ದಾರೆ.
ಸಿಎಂ ಸೇರಿದಂತೆ ಎಲ್ಲ ಸಚಿವರೂ ಕಾಸರಗೋಡು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಭದ್ರತೆಗಾಗಿ ಕೋಯಿಕ್ಕೋಡ್, ಕಣ್ಣೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಪೊಲಿಸರನ್ನು ಕರೆಸಿಕೊಳ್ಳಲಾಗಿದೆ.