ವಾಷಿಂಗ್ಟನ್ : ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಜೊತೆಗೆ 2+2 ಸಚಿವರ ಹಂತದ ಮಾತುಕತೆ ನಡೆಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಹಾಗೂ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಈ ತಿಂಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಮೆರಿಕ ತಿಳಿಸಿದೆ.
ಈ ಕುರಿತು ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ್, 'ಬ್ಲಿಂಕನ್ ಅವರು ನವೆಂಬರ್ 2ರಿಂದ 10ರವರೆಗೆ ಇಸ್ರೇಲ್ ಮತ್ತು ಜೋರ್ಡಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಬಳಿಕ ಜಪಾನ್, ದಕ್ಷಿಣ ಕೊರಿಯಾ ಮತ್ತು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ' ಎಂದರು.
ಬ್ಲಿಂಕನ್ ಮತ್ತು ಲಾಯ್ಡ್ ಆಸ್ಟಿನ್ ಅವರು ಯಾವ ದಿನ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬುದು ಇನ್ನಷ್ಟೇ ಘೋಷಣೆಯಾಗಬೇಕಿದೆ. ಭಾರತ ಮತ್ತು ಅಮೆರಿಕದ ನಿಯೋಗಗಳು 2+2 ಸಚಿವರ ಮಾತುಕತೆ ಸಭೆಯಲ್ಲಿ ಭಾಗವಹಿಸಲಿವೆ. ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆ, ಜಾಗತಿಕ ವಿಚಾರಗಳು ಹಾಗೂ ಹಿಂದೂ ಮಹಾಸಾಗರ-ಪೆಸಿಫಿಕ್ ಮಹಾಸಾಗರ ಪ್ರದೇಶದ ಅಭಿವೃದ್ಧಿ ವಿಚಾರಗಳ ಕುರಿತು ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಮಿಲ್ಲರ್ ತಿಳಿಸಿದ್ದಾರೆ.