ಹೈದರಾಬಾದ್: ಮಾಜಿ ಪ್ರಧಾನಿಗಳಾದ ಆಟಲ್ ಬಿಹಾರಿ ವಾಜಪೇಯಿ ಹಾಗೂ ಪಿ.ವಿ ನರಸಿಂಹ ರಾವ್ ಅವರ ಎದುರು ಸ್ಪರ್ಧಿಸಿ ಸೋತಿದ್ದ, ದೇಶದ ವಿವಿಧ ಬಾಗಗಳಲ್ಲಿ 236 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿರುವ, 'ಎಲೆಕ್ಷನ್ ಕಿಂಗ್' ಖ್ಯಾತಿಯ ತಮಿಳುನಾಡಿನ ಕೆ. ಪದ್ಮರಾಜನ್ ಮತ್ತೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಗಜ್‌ವೆಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆ ಮೂಲಕ ದಾಖಲೆಯ 237ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗಳಿಂದ ಹಿಡಿದು ರಾಷ್ಟ್ರಪತಿ ಚುನಾವಣೆಗೂ ನಾಮಪತ್ರ ಸಲ್ಲಿಸಿರುವ ಕೆ. ಪದ್ಮರಾಜನ್, ಟೈರ್ ಪಂಚರ್ ಅಂಗಡಿ ನಡೆಸುತ್ತಿದ್ದಾರೆ. 1998ರಲ್ಲಿ ಮೆಟ್ಟೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ನಾಮಪತ್ರ ಸಲ್ಲಿಸಿದ್ದರು. ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಹಾಗೂ ದೆಹಲಿಯ ಚುನಾವಣೆಗಳಲ್ಲಿಯೂ ನಾಮಪತ್ರ ಸಲ್ಲಿಸಿದ್ದರು.
ಹೋಮಿಯೋಪಥಿ ವೈದ್ಯ ಎಂದು ಹೇಳಿಕೊಳ್ಳುವ ಪದ್ಮರಾಜನ್, ನೂರಾರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಮೂಲಕ ದಾಖಲೆ ಮಾಡಿದ್ದಾರೆ. ಇದಕ್ಕಾಗಿ ಸುಮಾರು 1 ಕೋಟಿ ರೂಪಾಯಿಯಷ್ಟು ಹಣವನ್ನೂ ಖರ್ಚು ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಯನಾಡ್‌ನಲ್ಲಿ ಸ್ಪರ್ಧೆ ಮಾಡಿದ್ದರು.
2011ರ ತಮಿಳುನಾಡು ಚುನಾವಣೆಯಲ್ಲಿ ಮೆಟ್ಟೂರು ಕ್ಷೇತ್ರದಿಂದ ಸ್ಪರ್ಧಿಸಿ 6,273 ಮತಗಳು ಪಡೆದದ್ದು ಈವರೆಗೆ ಅವರು ಪಡೆದ ಅತೀ ಹೆಚ್ಚು ಮತಗಳು.
ತನ್ನ ಕುಟುಂಬದ ಸದಸ್ಯರು ಇದುವರೆಗೂ ಯಾವುದೇ ಆದಾಯ ತೆರಿಗೆ ಪಾವತಿ ಮಾಡಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಒಂದು ಮೋಪೆಡ್ ಸೇರಿ ₹1.10 ಲಕ್ಷ ಮೌಲ್ಯದ ಚರಾಸ್ಥಿ ಇದೆ. ವಾರ್ಷಿಕ ₹1 ಲಕ್ಷ ಆದಾಯ ಇದೆ. 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಅಣ್ಣಾಮಲೈ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ ಓದುತ್ತಿರುವುದಾಗಿ ಅಫಿಡವಿಡ್‌ನಲ್ಲಿ ತಿಳಿಸಿದ್ದಾರೆ.