ನವದೆಹಲಿ: ಬೇರೆಯವರ ಹೆಸರಿನಲ್ಲಿ ನೀಡಲಾದ ವಿದೇಶಿ ಕರೆನ್ಸಿಯನ್ನು ತನ್ನ ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದು ಆರ್‌ಬಿಐ ನಿಯಮಗಳಿಗೆ ವಿರುದ್ಧವಾಗಿದ್ದು ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ (ED), ಹೀರೊ ಮೊಟೊಕಾರ್ಪ್‌ನ ಅಧ್ಯಕ್ಷ ಪವನ್ ಕಾಂತ್ ಮುಂಜಾಲ್‌ಗೆ ಸೇರಿದ ₹24.95 ಕೋಟಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿದೆ.
69 ವರ್ಷದ ಮುಂಜಾಲ್ ಅವರು ಹೀರೊ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಹೌದು. ವಿದೇಶಿ ಕನರೆನ್ಸಿಯು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಹಲವು ನೌಕರರ ಹೆಸರಿನಲ್ಲಿ ಬ್ಯಾಂಕ್‌ನಿಂದ ವಿತರಣೆಯಾಗಿದೆ. ನಂತರ ಅವರೆಲ್ಲರೂ ಮುಂಜಾಲ್ ಅವರ ಮಾಧ್ಯಮ ವ್ಯವಸ್ಥಾಪಕರಿಗೆ ನೀಡಿದ್ದಾರೆ. ಇದನ್ನು ರಹಸ್ಯವಾಗಿ ಕೊಂಡೊಯ್ದ ಅವರು, ಮುಂಜಾಲ್ ಅವರ ವಿದೇಶಿ ಪ್ರವಾಸ ಸಂದರ್ಭದಲ್ಲಿ ಅವರ ವೈಯಕ್ತಿಕ ಖರ್ಚಿಗೆ ಇವುಗಳನ್ನು ಬಳಕೆ ಮಾಡಲಾಗಿದೆ' ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
'ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ವರ್ಷಕ್ಕೆ 2.5 ಲಕ್ಷ ಅಮೆರಿಕನ್ ಡಾಲರ್ ಖರ್ಚಿನ ಮಿತಿಯನ್ನು ಆರ್‌ಬಿಐ ಹೇರಿದೆ. ಆದರೆ ಮುಂಜಾಲ್ ಪ್ರಕರಣದಲ್ಲಿ ಇದನ್ನು ಉಲ್ಲಂಘಿಸಲಾಗಿದೆ. ಮುಂಜಾಲ್ ಅವರು ಅಕ್ರಮವಾಗಿ ₹56 ಕೋಟಿ ಮೊತ್ತದ ವಿದೇಶಿ ಕರೆನ್ಸಿಯನ್ನು ದೇಶದಿಂದ ಹೊರಕ್ಕೆ ತೆಗೆದುಕೊಂಡು ಹೋಗಿದ್ದಾರೆ' ಎಂದು ಇಡಿ ಆರೋಪಿಸಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾಲ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳಲ್ಲಿ ಕಳೆದ ಆಗಸ್ಟ್‌ನಲ್ಲಿ ಇಡಿ ಹಲವು ಬಾರಿ ದಾಳಿ ನಡೆಸಿತ್ತು. ಇದಾದ ನಂತರ ಅವರಿಗೆ ಸೇರಿದ ಸುಮಾರು ₹25 ಕೋಟಿ ಮೊತ್ತದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.
ಹೀರೊ ಮೊಟೊಕಾರ್ಪ್ ಕಂಪನಿಯು ದ್ವಿಚಕ್ರ ವಾಹನ ತಯಾರಿಕೆಯಲ್ಲಿ 2001ರಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಕಂಪನಿಯಾಗಿದ್ದು, ಅದು ಈವರೆಗೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಏಷ್ಯಾ, ಆಫ್ರಿಕಾ, ದಕ್ಷಿಣ ಮತ್ತು ಅಮೆರಿಕದ ಮಧ್ಯಭಾಗ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಘಟಕ ಹೊಂದಿದೆ.
ಕಂಪನಿಯ ಅಧ್ಯಕ್ಷ ಮುಂಜಾಲ್ ಮನೆ ಮೇಲೆ ಕಳೆದ ಮಾರ್ಚ್‌ನಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ₹800 ಕೋಟಿಯಷ್ಟು ವ್ಯಾವಹಾರಿಕ ಖರ್ಚು ತೋರಿಸಲಾಗಿದೆ. ಆದರೆ ದಾಖಲೆ ಇಲ್ಲದ ₹60 ಕೋಟಿ ಹಣವನ್ನು ದೆಹಲಿಯಲ್ಲಿ ಜಾಗ ಖರೀದಿಗೆ ಬಳಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿತ್ತು.