ನವದೆಹಲಿ: ಭಯೋತ್ಪಾದನೆ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವ ಸಂಸ್ಥೆಗಳ ಕುಣಿಕೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ.
ಉಗ್ರರಿಗೆ ಹಣಕಾಸು ನೆರವು ನೀಡುವ ಸಂಸ್ಥೆಗಳು ಹಾಗೂ ಇವುಗಳೊಂದಿಗೆ ನಂಟು ಹೊಂದಿರುವ ಸಂಸ್ಥೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಗುರುತಿಸಿದೆ.
ಉಗ್ರರಿಗೆ ಹಣಕಾಸು ನೆರವು ಒದಗಿಸುವ ಸಂಸ್ಥೆಗಳನ್ನು ಗುರುತಿಸುವುದು, ಅವುಗಳ ಬಗ್ಗೆ ಅಧಿಸೂಚನೆ ಹೊರಡಿಸಿ ಹಾಗೂ ಅವುಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿ ಆರ್ಥಿಕ ಗುಪ್ತಚರ ಘಟಕವನ್ನು(ಎಫ್‌ಐಯು) ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿದೆ.
ಆರ್‌ಬಿಐ, ಸೆಬಿ, ಐಆರ್‌ಡಿಎ, ಐಬಿ, ಎನ್‌ಐಎ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳಿಗೆ ನಿರ್ದೇಶನ ಸಹ ನೀಡಲಾಗಿದೆ.
ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ (ಭದ್ರತಾ ಮಂಡಳಿ) ಕಾಯ್ದೆ,1947ರ ಸೆಕ್ಷನ್ 2ರಲ್ಲಿ ವಿವರಿಸಿರುವ ಪ್ರಕಾರ, ಭಾರತ ಈ ಕುರಿತು ಕಾಯ್ದೆಯನ್ನು ರೂಪಿಸಿದೆ.