ಬೆತುಲ್, : ದೇಶದ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ₹24,000 ಕೋಟಿ ಮೊತ್ತದ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ.
ಬುಡಕಟ್ಟು ಜನಾಂಗದ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಬುಧವಾರದಂದು ಪ್ರಧಾನಿ ಮೋದಿ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಯೋಜನೆ ಪ್ರಕಟಿಸಲಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದ್ದು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸುನಿಶ್ಚಿತ ಎಂದು ಹೇಳಿದ್ದಾರೆ.
ಮೋದಿಯ ಗ್ಯಾರಂಟಿಯ ಮುಂದೆ ಕಾಂಗ್ರೆಸ್‌ನ ಸುಳ್ಳು ಭರವಸೆಗಳು ನಿಲ್ಲುವುದಿಲ್ಲ ಎಂಬುದನ್ನು ಕಾಂಗ್ರೆಸ್ಸಿಗರು ಅರಿತಿದ್ದಾರೆ. ಜನರಿಗೆ ನೀಡಿದ ಎಲ್ಲ ಗ್ಯಾರಂಟಿಗಳನ್ನು ನಾನು ಈಡೇರಿಸುತ್ತೇನೆ. ಇದುವೇ ನನ್ನ ಗ್ಯಾರಂಟಿ ಎಂದು ಅವರು ಹೇಳಿದ್ದಾರೆ.
ನಾನು ನಾಳೆ ಜಾರ್ಖಂಡ್‌ಗೆ ಭೇಟಿ ನೀಡುತ್ತೇನೆ. ಇಡೀ ದೇಶವೇ ಬುರ್ಸಾ ಮುಂಡಾ ಜಯಂತಿಯನ್ನು ಆಚರಿಸಲಿದ್ದು, ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಕೇಂದ್ರವು ₹24 ಸಾವಿರ ಕೋಟಿ ಮೊತ್ತದ ಯೋಜನೆ ಪ್ರಾರಂಭಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.