ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26 \11) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಹುತಾತ್ಮ ಯೋಧರಿಗೆ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಪುಷ್ಪ ನಮನ ಸಲ್ಲಿಸಿದರು.
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪೊಲೀಸರು ಮತ್ತು ಯೋಧರ ಸ್ಮರಣಾರ್ಥವಾಗಿ ಮುಂಬೈ ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಿದರು.
ಈ ವೇಳೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹುತಾತ್ಮ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ, 'ನಿಮ್ಮೊಂದಿಗೆ ಸದಾ ನಾವು ಇದ್ದೇವೆ' ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಚಿವರಾದ ದೀಪಕ್ ಕೇಸರ್ಕರ್, ಮಂಗಲಪ್ರಭಾತ್ ಲೋಧಾ, ಪೊಲೀಸ್ ಮಹಾನಿರ್ದೇಶಕ ರಜನೀಶ್ ಶೇಠ್ ಮತ್ತು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಉಪಸ್ಥಿತರಿದ್ದರು.
ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಭಯೋತ್ಪಾದಕರು 2008ರ ನವೆಂಬರ್ 26ರಂದು ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿದ್ದರು. ಏಕಾಏಕಿ ನಡೆಸಿದ ಗುಂಡಿನಲ್ಲಿ ದಾಳಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.