ಮುಂಬೈ : ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಬಿಕ್ಕಟ್ಟಿಗೂ, ಮುಂಬೈನಲ್ಲಿ ನಡೆದಿದ್ದ 26/11ರ ಭಯೋತ್ಪಾದಕರ ದಾಳಿ ಕೃತ್ಯಕ್ಕೂ ಹೋಲಿಕೆಯಿದೆ ಎನ್ನುತ್ತಾರೆ ಮೊಶೆ ಹೊಟ್ಜ್ ಬರ್ಗ್.
ಇವರು, 26/11ರ ಉಗ್ರರ ದಾಳಿಯಲ್ಲಿ ತಂದೆ- ತಾಯಿ ಕಳೆದುಕೊಂಡಿದ್ದ 'ಬೇಬಿ ಮೊಶೆ' ಅವರ ಚಿಕ್ಕಪ್ಪ. ಬೇಬಿ ಮೊಶೆ ಈಗ 17ರ ಯುವಕ. 'ಗಾಜಾದಲ್ಲಿ ಹಮಾಸ್ ಬಂಡುಕೋರರು ಹಲವು ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದಾರೆ. ಅದನ್ನು ನೋಡಿ ನನಗೆ ಉಗ್ರ ದಾಳಿ ವೇಳೆ ಹೋಟೆಲ್‌ನಲ್ಲಿ ಸಿಲುಕಿದ್ದ ಬೇಬಿ ಮೊಶೆ ಸ್ಥಿತಿ ನೆನಪಾಯಿತು' ಎಂದು ಹೊಟ್ಜ್ ಸ್ಮರಿಸಿದರು.
26/11ರ ಕೃತ್ಯ ಘಟಿಸಿ 15 ವರ್ಷ ಕಳೆಯುತ್ತಿರುವ ಹೊತ್ತಿನಲ್ಲಿ ಅಮೆರಿಕದಿಂದ ನಗರವೊಂದರಿಂದ ದೂರವಾಣಿಯಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಅವರು ಮಾತನಾಡಿದರು.
ಪಾಕ್ ಮೂಲದ ಲಷ್ಕರ್ ಎ ತಯಬಾ ಸಂಘಟನೆಯ ಉಗ್ರರು ಅಂದು ಮುಂಬೈನಲ್ಲಿ ದಾಳಿ ಮಾಡಿದ್ದರು. ವಿದೇಶಿಯರು ಸೇರಿದಂತೆ ಹಲವರು ಅಂದಿನ ದಾಳಿಯಲ್ಲಿ ಮೃತಪಟ್ಟಿದ್ದರು.
ಒತ್ತೆಯಾಳುಗಳ ಮನಸ್ಥಿತಿ, ಅಂತಹ ಪರಿಸ್ಥಿತಿಯು ಭಾರತಕ್ಕೆ ಚೆನ್ನಾಗಿ ಅರ್ಥವಾಗಲಿದೆ. 'ಬೇಬಿ ಮೊಶೆ' ಅಂದು ಉಗ್ರರ ಒತ್ತೆಯಾಳುಗಳಲ್ಲಿ ಒಬ್ಬನಾಗಿದ್ದ. ಈಗ ಹಮಾಸ್ ಬಂಡುಕೋರರು ಒತ್ತೆ ಇರಿಸಿಕೊಂಡಿರುವವರಲ್ಲಿ 12ಕ್ಕೂ ಹೆಚ್ಚು ಮೊಶೆಗಳಿದ್ದಾರೆ.
17ರ ವಯಸ್ಸಿನ ಮೊಶೆ ಈಗ ವಿದ್ಯಾರ್ಥಿ. ಇಸ್ರೇಲ್‌ನಲ್ಲಿ ಇರುವ 'ಬೇಬಿ ಮೊಶೆ'ಗೆ ಸಂದರ್ಭದ ವಸ್ತುಸ್ಥಿತಿ ಗೊತ್ತಿದೆ. ಆತ ಕೇವಲ ಗುಂಡಿನ ಚಕಮಕಿ ಬಗ್ಗೆ ಮಾತನಾಡುವುದಿಲ್ಲ. ಬಾಲ್ಯದಲ್ಲಿ ಅದರ ಜೊತೆಗೆ ಜೀವಿಸಿದ್ದ' ಎಂದರು.
'ಅಲ್ಲದೆ, ಈಗ ದಾಳಿ ಗಾಜಾದ ಮೇಲಷ್ಟೇ ನಡೆಯುತ್ತಿಲ್ಲ. ಟೆಲ್‌ಅವೀವ್, ಇಸ್ರೇಲ್‌ನ ವಿವಿಧೆಡೆಯೂ ಕ್ಷಿಪಣಿ ದಾಳಿ ನಡೆಯುತ್ತಿದೆ. ಅಲ್ಲಿ ಸ್ವಯಂ ರಕ್ಷಣಾ ವ್ಯವಸ್ಥೆ ಇರುವ ಕಾರಣ ಅಲ್ಲಿ ಜನ ಉಳಿದುಕೊಂಡಿದ್ದಾರೆ' ಎಂದು ಹೇಳಿದರು.