ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನ, ಗ್ರಾಹಕರಿಗೆ ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯವಾಗುವಂತೆ ಮಾಡಲು ದೇಶಾದ್ಯಂತ 'ಭಾರತ್ ಅಟ್ಟಾ' ಬ್ರಾಂಡ್‌ನಲ್ಲಿ ಕೆಜಿಗೆ ರೂ 27.50 ರ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟಿನ ಮಾರಾಟವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.
'ಭಾರತ್ ಅಟ್ಟಾ'ವನ್ನು ಸಹಕಾರಿ ಸಂಸ್ಥೆಗಳಾದ ಎನ್‌ಎಎಫ್‌ಇಡಿ, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ ಮೂಲಕ 800 ಸಂಚಾರಿ ವಾಹನಗಳು ಮತ್ತು 2,000ಕ್ಕೂ ಹೆಚ್ಚು ಸರ್ಕಾರಿ ಮಳಿಗೆಗಳ ಮೂಲಕ ದೇಶಾದ್ಯಂತ ಮಾರಾಟ ಮಾಡಲಾಗುವುದು. ಸಬ್ಸಿಡಿ ದರವು ಗುಣಮಟ್ಟ ಮತ್ತು ಸ್ಥಳದ ಆಧಾರದ ಮೇಲೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರ 36-70 ರೂ. ಗಳಿಗಿಂತಲೂ ಕಡಿಮೆಯಾಗಿರುತ್ತದೆ.
ಫೆಬ್ರವರಿಯಲ್ಲಿ ಬೆಲೆ ಸ್ಥಿರೀಕರಣ ನಿಧಿ ಯೋಜನೆಯ ಭಾಗವಾಗಿ ಕೆಲವು ಮಳಿಗೆಗಳಲ್ಲಿ ಈ ಸಹಕಾರಿ ಒಕ್ಕೂಟಗಳ ಮೂಲಕ ಪ್ರತಿ ಕೆಜಿಗೆ 29.50 ರೂ.ಗೆ 18,000 ಟನ್ 'ಭಾರತ್ ಅಟ್ಟಾ'ದ ಪ್ರಾಯೋಗಿಕ ಮಾರಾಟವನ್ನು ನಡೆಸಿತು.
ನವದೆಹಲಿಯ ಕರ್ತವ್ಯ ಪಥದಲ್ಲಿ 'ಭಾರತ್ ಅಟ್ಟಾ'ದ 100 ಸಂಚಾರಿ ವಾಹನಗಳಿಗೆ ಚಾಲನೆ ನೀಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಪ್ರಾಯೋಗಿಕ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದೇವೆ, ನಾವು ದೇಶದೆಲ್ಲೆಡೆ ಕೆಜಿಗೆ 27.50 ರೂ. ದರದಲ್ಲಿ ಗೋಧಿ ಹಿಟ್ಟು ದೊರೆಯಲಿದೆ ಎಂದು ತಿಳಿಸಿದರು.