ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸರ್ಕಾರ ಡಿಸೆಂಬರ್ 2 ರಂದು ಸರ್ವಪಕ್ಷ ಸಭೆ ಕರೆದಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಅಧಿವೇಶನವು ಡಿಸೆಂಬರ್ 4 ರಂದು ಪ್ರಾರಂಭವಾಗಿ ಡಿಸೆಂಬರ್ 22 ರಂದು ಅಂತ್ಯಗೊಳ್ಳಲಿದೆ. ಅಧಿವೇಶನಕ್ಕೂ ಒಂದು ದಿನ ಮೊದಲು ಸರ್ವಪಕ್ಷ ಸಭೆ ಕರೆಯಲಾಗುತ್ತಿತ್ತು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳು ಅಧಿವೇಶನದ ಮೇಲೆ ಪ್ರಮುಖ ಪರಿಣಾಮ ಬೀರಲಿದ್ದು, ಈ ಸಮಯದಲ್ಲಿ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ 'ಪ್ರಶ್ನೆಗಾಗಿ ಲಂಚ' ಆರೋಪಗಳ ಬಗ್ಗೆ ನೈತಿಕ ಸಮಿತಿಯ ವರದಿಯನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಸಮಿತಿ ಶಿಫಾರಸು ಮಾಡಿದ ಉಚ್ಚಾಟನೆ ಜಾರಿಗೆ ಬರುವ ಮೊದಲು ಸದನವು ವರದಿಯನ್ನು ಅಂಗೀಕರಿಸಬೇಕಾಗುತ್ತದೆ.
ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆ ಬದಲಿಸಲು ಪ್ರಯತ್ನಿಸುವ ಮೂರು ಪ್ರಮುಖ ಮಸೂದೆಗಳನ್ನು ಅಧಿವೇಶನದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈಗಾಗಲೇ ಗೃಹ ಸ್ಥಾಯಿ ಸಮಿತಿಯು ಮೂರು ವರದಿಗಳನ್ನು ಅಂಗೀಕರಿಸಿದೆ.
ಬಾಕಿ ಇರುವ ಮತ್ತೊಂದು ಪ್ರಮುಖ ಮಸೂದೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದೆ.