ನವದೆಹಲಿ: ಸದ್ಯ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾಯ್ದೆಗಳಿಗೆ ಪರ್ಯಾಯವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಮೂರು ಕಾಯ್ದೆಗಳ ಮಸೂದೆಗಳಿಗೆ ಸಂಬಂಧಿತ ವರದಿಗಳನ್ನು ಗೃಹ ಸಚಿವಾಲಯದ ಸಂಸದೀಯ ಸಮಿತಿ ಸೋಮವಾರ ಅಂಗೀಕರಿಸಿತು.
ನವದೆಹಲಿ: ಸದ್ಯ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾಯ್ದೆಗಳಿಗೆ ಪರ್ಯಾಯವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಮೂರು ಕಾಯ್ದೆಗಳ ಮಸೂದೆಗಳಿಗೆ ಸಂಬಂಧಿತ ವರದಿಗಳನ್ನು ಗೃಹ ಸಚಿವಾಲಯದ ಸಂಸದೀಯ ಸಮಿತಿ ಸೋಮವಾರ ಅಂಗೀಕರಿಸಿತು.
ಬಿಜೆಪಿಯ ಸಂಸದ ಬ್ರಿಜ್‌ಲಾಲ್ ನೇತೃತ್ವದ ಸಂಸದೀಯ ಸಮಿತಿಯು ವರದಿ ಅಂಗೀಕರಿಸಿತು. ವಿರೋಧಪಕ್ಷಗಳ ಕೆಲವು ಸದಸ್ಯರು ಕರಡು ಮಸೂದೆಗಳಿಗೆ ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರಡು ಮಸೂದೆಗಳಿಗೆ ಸಂಬಂಧಿಸಿ ವರದಿಗಳನ್ನು ಪರಿಶೀಲನೆಗಾಗಿ ಸದಸ್ಯರಿಗೆ ಅಕ್ಟೋಬರ್‌ನಲ್ಲಿ ಕಳುಹಿಸಲಾಗಿತ್ತು. ಇನ್ನಷ್ಟು ಸಮಯವನ್ನು ನೀಡಬೇಕು ಎಂದು ಕೆಲವು ಸದಸ್ಯರು 10 ದಿನದ ಹಿಂದೆ ಮನವಿ ಮಾಡಿದ್ದರು.
ತಮ್ಮ ವಿರೋಧವನ್ನು ದಾಖಲಿಸಿ ಕೆಲ ಸದಸ್ಯರು ಈಗಾಗಲೇ ವರದಿ ನೀಡಿದ್ದಾರೆ. ಇನ್ನೂ ಕೆಲವರು, ನಿಯಮಗಳ ಅನುಸಾರ ಎರಡು ದಿನದಲ್ಲಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ವಿವರಿಸಿವೆ.
ಅಕ್ಟೋಬರ್ 27ರಂದು ನಡೆದಿದ್ದ ಸಭೆಯಲ್ಲಿ ಕೆಲ ಸದಸ್ಯರು ಇನ್ನಷ್ಟು ಕಾಲಾವಕಾಶ ಕೇಳಿದ್ದರು. ಹೀಗಾಗಿ, ಆ ದಿನದ ಸಭೆಯಲ್ಲಿ ವರದಿಗಳನ್ನು ಅಂಗೀಕರಿಸಲು ಆಗಿರಲಿಲ್ಲ.
ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ 1973 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ 1872ಕ್ಕೆ ಬದಲಾಗಿ 'ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ನ್ಯಾಯ ಅಧಿನಿಯಮ' ತರಲು ಸರ್ಕಾರ ಉದ್ದೇಶಿಸಿದೆ. ಗೃಹ ಸಚಿವ ಅಮಿತ್ ಶಾ ಈ ಸಂಬಂಧ ಮಸೂದೆಗಳನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಿದ್ದರು. ಬಳಿಕ ಮಸೂದೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು.